

ಬೆಳಗಾವಿ: ಐಪಿಎಲ್ ಕ್ರಿಕೆಟ್ ಟಿಕೆಟ್ ಬುಕ್ಕಿಂಗ್ ಹಾಗೂ ಮಾರಾಟದಲ್ಲಿ ದೊಡ್ಡ ಪ್ರಮಾಣದಲ್ಲಿ ಹಗರಣ ನಡೆಯುತ್ತಿದ್ದು, ಶಾಸಕರು, ಸಂಸದರು, ವಿಐಪಿಗಳ ಹೆಸರಿನಲ್ಲಿ ಮೀಸಲಿಟ್ಟಿರುವ ಟಿಕೆಟ್ ದುರ್ಬಳಕೆ ಆಗುತ್ತಿವೆ ಎಂದು ಶಾಸಕ ಅಭಯ ಪಾಟೀಲ ದೂರಿದರು.
ನಗರದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಪಿಎಲ್ ಕ್ರಿಕೆಟ್ ವೀಕ್ಷಣೆಗೆ ಆನ್‌ಲೈನ್, ಆಪ್‌ಲೈನ್‌ನಲ್ಲಿ ಟಿಕೆಟ್ ಸಿಗುತ್ತಿಲ್ಲ. ವಿವಿಧ ಕೋಟಾದಡಿ ಮೀಸಲಿಟ್ಟಿರುವ ಟಿಕೆಟ್ ಕೂಡ ದುಬಾರಿ ದರಕ್ಕೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸ್ವತಃ ನಾನೇ ಟಿಕೆಟ್ ಪಡೆದುಕೊಳ್ಳಲು ಹರಸಾಹಸ ಪಟ್ಟರು ಒಂದೇ ಒಂದು ಟಿಕೆಟ್ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪ್ರತಿಯೊಂದು ಮ್ಯಾಚ್ ವೀಕ್ಷಣೆಗೆ ಶಾಸಕರು, ಸಂಸದರು, ವಿಐಪಿಗಳಿಗೆ ತಲಾ ಒಂದರಂತೆ ಟಿಕೆಟ್ ಕಾಯ್ದಿರಿಸಲಾಗುತ್ತದೆ. ಆದರೆ, ಐಪಿಎಲ್‌ನಲ್ಲಿ ಯಾವ್ಯಾವ ಕೋಟಾದಡಿ ಎಷ್ಟು ಟಿಕೆಟ್ ಮೀಸಲಿಡಲಾಗುತ್ತಿದೆ. ಎಷ್ಟು ಟಿಕೆಟ್ ಆನ್‌ಲೈನ್, ಆಪ್‌ಲೈನ್‌ನಲ್ಲಿ ಮಾರಾಟವಾಗುತ್ತಿವೆ ಎಂಬುದನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಸ್ಪಷ್ಟಪಡಿಸಬೇಕು. ಟಿಕೆಟ್ ವಿತರಣೆಯಲ್ಲಿ ದೊಡ್ಡ ಮಾಪಿಯಾ ಕೆಲಸ ಮಾಡುತ್ತಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ತೆರಿಗೆ ನಷ್ಟವಾಗುತ್ತಿದೆ. ಈ ಸಂಬಂಧ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.