ಟಿಪ್ಪು ಹೆಸರು ಇಡುವುದರಲ್ಲಿ ತಪ್ಪೇನಿದೆ: ಡಾ.ಎಚ್.ಸಿ.ಮಹದೇವಪ್ಪ ಪ್ರಶ್ನೆ

NANJANGUD-Cong-H.C. Mahadevappa-Ex Minister (2)
Published on

ಮೈಸೂರು: ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ನಮ್ಮ ಸರ್ಕಾರವೇ ಶಿಫಾರಸು ಮಾಡಿತ್ತು. ನಾಲ್ವಡಿ ಹೆಸರು ಇಡುವುದಕ್ಕೆ ನಮ್ಮ ತಕರಾರಿಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡಬೇಕು ಎನ್ನುವ ಶಾಸಕ ಪ್ರಸಾದ್ ಅಬ್ಬಯ್ಯ ಅವರ ಹೇಳಿಕೆ ಕುರಿತು ನಗರದಲ್ಲಿ ಸೋಮವಾರ ಪ್ರತಿಕ್ರಿಯೆ ನೀಡಿದ ಸಚಿವರು, ಟಿಪ್ಪು ಹೆಸರು ಇಡುವುದು, ಬಿಡುವುದು ಬೇರೆ ವಿಷಯ. ಆದರೆ, ಹೆಸರು ಹೇಳಿದಾಕ್ಷಣ ಚರ್ಚೆಯನ್ನೇ ಮಾಡದೆ ವಿರೋಧಿಸುವುದು ಸರಿಯಲ್ಲ ಎಂದರು.
ಟಿಪ್ಪು ಸುಲ್ತಾನ್ ಮೈಸೂರು ರಾಜ್ಯವನ್ನಾಳಲಿಲ್ಲವೇ? ಸ್ವಾತಂತ್ರೃ ಹೋರಾಟಗಾರ ಅಲ್ಲವೇ? ಮಲಬಾರ್‌ನಲ್ಲಿ ಹೆಣ್ಣುಮಕ್ಕಳ ರಕ್ಷಣೆ ಮಾಡಲಿಲ್ಲವೇ? ಭೂ ಸುಧಾರಣಾ ಕಾಯ್ದೆ ಜಾರಿಗೆ ತರಲಿಲ್ಲವೇ? ದೇಶಕ್ಕೆ ರೇಷ್ಮೆ ಪರಿಚಯಿಸಿದ್ದು ಯಾರು? ಅವರ ಹೆಸರು ಇಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸುವ ಮೂಲಕ ಚರ್ಚೆಯನ್ನು ಸಮರ್ಥಿಸಿಕೊಂಡರು.

ಸಾರ್ವಜನಿಕ ಜೀವನದಲ್ಲಿ ಸಹಜ:
ಸಂಸತ್‌ನಲ್ಲಿ ಸ್ಮೋಕ್ ಬಾಂಬ್ ಪ್ರಕರಣ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಷಯ. ಆರೋಪಿಗಳಿಗೆ ಬೇರೆಯವರು, ಅದರಲ್ಲೂ ಅನ್ಯ ಧರ್ಮದವರು ಅನುಮತಿ ಪತ್ರ ನೀಡಿದ್ದರೆ ದೇಶದ ಗತಿ ಏನಾಗುತ್ತಿತ್ತು? ಪಾಸ್ ಕೊಟ್ಟಿದ್ದ ಕಾರಣ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಇದಕ್ಕೆ ಬೇರೆ ಅರ್ಥ ಬೇಡ. ಸಾರ್ವಜನಿಕ ಜೀವನದಲ್ಲಿ ಇರುವಾಗ ಒಂದೊಂದು ಸಲ ಗಡಿಪಾರು ಆದವರು, ಕೊಲೆ ಆರೋಪಿಗಳು ನಮ್ಮ ಜತೆಯೇ ಫೋಟೋ ತೆಗೆಸಿಕೊಂಡಿರುತ್ತಾರೆ. ಅದನ್ನು ನಾವು ಗಮನಿಸೋಕೆ ಆಗುತ್ತಾ? ಇದು ಅದೇ ರೀತಿ ಅಷ್ಟೇ ಎಂದು ಸಚಿವ ಮಹದೇವಪ್ಪ ಹೇಳಿದರು.

ಮುನ್ನೆಚ್ಚರಿಕೆ:
ಮೈಸೂರು ಗಡಿ ಜಿಲ್ಲೆಯಾದ ಕಾರಣ ರೂಪಾಂತರಿ ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸುವ ಮೂಲಕ ವೈರಸ್ ಹರಡದಂತೆ ತಡೆಗಟ್ಟಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗುವುದು. ಜನರು ಕೂಡ ಸಹಕಾರ ನೀಡಬೇಕು ಎಂದು ಸಚಿವರು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net