

ಮರಿಯಮ್ಮನಹಳ್ಳಿ: ರಂಗಕರ್ಮಿಗಳು ಮತ್ತು ಕಲಾವಿದರು ಅಧ್ಯಯನಶೀಲರಾಗುವುದರ ಜತೆಗೆ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುವ ವಿಶಿಷ್ಟ ದೃಷ್ಟಿಕೋನ ಹೊಂದಬೇಕು ಎಂದು ಉಪನ್ಯಾಸಕ ಎಂ.ಸೋಮೇಶ್ ಉಪ್ಪಾರ್ ಹೇಳಿದರು.
ಇಲ್ಲಿನ ದುರ್ಗಾದಾಸ ಕಲಾಮಂದಿರದಲ್ಲಿ ಭಾನುವಾರ ರಾತ್ರಿ ರಂಗಬಿಂಬ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರಾಯೋಜಿತ ಕಾರ್ಯಕ್ರಮದಡಿಯಲ್ಲಿ ಸುಗಮ ಸಂಗೀತ ಹಾಗೂ ಸೀತಾ-ಮಂಡೋದರಿ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತಿಚಿನ ದಿನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವುದು ಕ್ಷೀಣಿಸುತ್ತಿದೆ. ಆದ್ದರಿಂದ ವಿದ್ಯಾಭ್ಯಾಸದ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿಹೊಂದುವಂತೆ ನೋಡಿಕೊಳ್ಳಬೇಕು ಎಂದರು.
ಪಪಂ ಉಪಾಧ್ಯಕ್ಷೆ ಲಕ್ಷ್ಮೀ ರೋಗಾಣಿ ಕಾರ್ಯಕ್ರಮ ಉದ್ಘಾಟಿಸಿದರು. ರಂಗಬಿಂಬದ ಅಧ್ಯಕ್ಷೆ ಎಂ.ಗಾಯತ್ರಿದೇವಿ ಅಧ್ಯಕ್ಷತೆ ವಹಿಸಿದ್ದರು. ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಡಾ.ಕೆ.ನಾಗರತ್ನಮ್ಮ, ರಂಗ ಶಿಕ್ಷಕ ಈಡಿಗರ ವೆಂಕಟೇಶ, ಪ.ಪಂ. ಸದಸ್ಯರಾದ ಪೂಜಾ, ಕೆ.ಮಂಜುನಾಥ, ಲಲಿತ ಕಲಾರಂಗದ ಅಧ್ಯಕ್ಷ ಎಚ್.ಮಂಜುನಾಥ, ರಂಗಬಿಂಬದ ಕಾರ್ಯದರ್ಶಿ ಸಿ.ಕೆ.ನಾಗರಾಜ, ಕಲಾವಿದರಾದ ಸಂತೋಷ ಕುಮಾರ್ ಚಂದುಕರ, ಸರದಾರ ಬಿ.ಸೋನು ಇತರರಿದ್ದರು.
ಜಿ.ಸೋಮಣ್ಣ ಗೊಲ್ಲರಹಳ್ಳಿ ತಂಡದವರಿಂದ ಸುಗಮ ಸಂಗೀತ ನಡೆಯಿತು. ನಂತರ ಬಸವರಾಜ ತಂಡದವರಿಂದ ಕುವೆಂಪು ವಿರಚಿತ ಶ್ರೀ ರಾಮಾಯಣ ದರ್ಶನಂ ಮಾಹಾಕಾವ್ಯದಿಂದ ಆಯ್ದ ಭಾಗವನ್ನು ಆಧರಿಸಿದ ಸರದಾರ ಬಿ. ನಿರ್ದೇಶನದಲ್ಲಿ ಸೀತಾ-ಮಂಡೋದರಿ ನಾಟಕ ಪ್ರದರ್ಶನಗೊಂಡಿತು.