ಮೈಸೂರು: ಸ್ಪಂದನ ಸಾಂಸ್ಕೃತಿಕ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿಸ್ಮಯ ಪ್ರಕಾಶನದಿಂದ ರಾಜ್ಯ ಮಟ್ಟದ ಯುಗಾದಿ ಕವಿಗೋಷ್ಠಿ ಆಯೋಜಿಸಲು ಉದ್ದೇಶಿಸಲಾಗಿದ್ದು, ನಾಡಿನ ಆಸಕ್ತ ಕವಿಗಳಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ.
ಈ ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವ ಯಾವುದೇ ವಯೋಮಾನದ ಕವಿ-ಕವಯತ್ರಿಯರು ಯಾವುದೇ ವಸ್ತು ವಿಷಯ ಕುರಿತು ಕವನಗಳನ್ನು ರಚಿಸಬಹುದು. ಆದರೆ ಕವನಗಳು ಗರಿಷ್ಠ ಇಪ್ಪತ್ತು ಸಾಲುಗಳ ಮಿತಿಯೊಳಗೆ ಇರಬೇಕು. ಕವನ/ಗಜಲುಗಳಾದರೆ ಎರಡನ್ನೂ ಅಥವಾ ಗರಿಷ್ಠ ಆರು ಸಾಲುಗಳ ಮಿತಿಯೊಳಗಿನ ಚುಟುಕು, ವಚನ, ಹನಿಗವನ, ಹಾಯ್ಕುಗಳಾದರೆ ಎಂಟನ್ನೂ ಕಳುಹಿಸಿಕೊಡಬೇಕು ಎಂದು ಸ್ಪಂದನ ಸಾಂಸ್ಕೃತಿಕ ಪರಿಷತ್ತು ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಯ್ಕೆಯಾದ ಕವಿಗಳಿಗೆ ಏ.6 ರಂದು ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಯುಗಾದಿ ಕವಿಮೇಳದಲ್ಲಿ ಕವನ ವಾಚನ ಮಾಡಲು ಅವಕಾಶ ನೀಡುವ ಜತೆಗೆ, ಪ್ರತಿಯೊಬ್ಬ ಕವಿಗೂ ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಮೊದಲು ಕವನಗಳನ್ನು ಕಳುಹಿಸಿದ 60 ಕವಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಆಸಕ್ತರು ತಮ್ಮ ಕವನಗಳನ್ನು ಕಿರು ಪರಿಚಯದ ಜತೆಗೆ ಮಾರ್ಚ್ 15 ರೊಳಗೆ ಟಿ.ಸತೀಶ್ ಜವರೇಗೌಡ, ಸಂಘಟಕರು, ವಿಸ್ಮಯ ಪ್ರಕಾಶನ, 442/10, ಕೃಷ್ಣ ಬೇಕರಿ ಬಿಲ್ಡಿಂಗ್, ರಾಮಸ್ವಾಮಿ ವೃತ್ತ, ಮೈಸೂರು-570004. ಈ ವಿಳಾಸಕ್ಕೆ ಅಂಚೆ ಮೂಲಕವೇ ಕಳುಹಿಸಬೇಕು. ಮಾಹಿತಿಗೆ ಮೊಬೈಲ್ ಸಂಖ್ಯೆ: 9880264678 ಅಥವಾ 8317457397 ಅನ್ನು ಸಂಪರ್ಕಿಸಲು ಅವರು ಕೋರಿದ್ದಾರೆ.