

ಮೈಸೂರು: ಹೆಸರಾಂತ ಸಂಶೋಧಕ, ಸಾಹಿತಿ ಪ್ರೊ.ಹಂ.ಪ. ನಾಗರಾಜಯ್ಯ ಅವರನ್ನು ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಗುರುವಾರ ಮೈಸೂರು ಜಿಲ್ಲಾಡಳಿತ ವತಿಯಿಂದ ಆಹ್ವಾನಿಸಲಾಯಿತು.
ಬೆಂಗಳೂರಿನ ಕ್ರಸೆಂಟ್ ರಸ್ತೆಯ ಅಮೆರಿಕನ್ ಕಾಲನಿಯಲ್ಲಿರುವ ಹಂಪನಾ ನಿವಾಸಕ್ಕೆ ಆಗಮಿಸಿದ ಜಿಲ್ಲಾಡಳಿತ ಹಿರಿಯ ಅಧಿಕಾರಿಗಳ ನಿಯೋಗವು ಅವರಿಗೆ ಮೈಸೂರು ಪೇಟ ತೊಡಿಸಿ, ಫಲಪುಷ್ಪದೊಂದಿಗೆ ಆಮಂತ್ರಣ ನೀಡಿತು.
ರಾಜಭವನಕ್ಕೆ ತೆರಳಿದ ಜಿಲ್ಲಾಡಳಿತದ ನಿಯೋಗವು, ದಸರಾ ಮಹೋತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರನ್ನು ಅಧಿಕೃತವಾಗಿ ಆಹ್ವಾನ ನೀಡಿತು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಬೆಂಗಳೂರಿನ ಸ್ವಗೃಹಕ್ಕೆ ತೆರಳಿದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ನಿಯೋಗವು ಮೈಸೂರು ದಸರಾಗೆ ಸಚಿವರಿಗೆ ಆಮಂತ್ರಣ ನೀಡಿತು. ನಂತರ, ದಸರಾ ಮಹೋತ್ಸವಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್.ಸಿ.ಮಹದೇವಪ್ಪ ಆಹ್ವಾನ ನೀಡಿದರು.
ಜಿಲ್ಲೆಯ ಶಾಸಕರಾದ ಡಿ.ರವಿಶಂಕರ್, ಅನಿಲ್ ಕುಮಾರ್, ಎಂಎಲ್‌ಸಿಗಳಾದ ಡಾ.ಯತೀಂದ್ರ, ಸಿ.ಎನ್.ಮಂಜೇಗೌಡ, ಡಾ.ಡಿ. ತಿಮ್ಮಯ್ಯ ಮತ್ತಿತರರೊಂದಿಗೆ ಸಿಎಂ ಗೃಹ ಕಚೇರಿ ಕೃಷ್ಣಾಕ್ಕೆ ತೆರಳಿದ ನಿಯೋಗವು ದಸರಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತೆ ಕೋರಿಕೊಂಡಿತು.
ಅಂತೆಯೇ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಕೃಷ್ಣೇಬೈರೇಗೌಡ, ಕೆ.ವೆಂಕಟೇಶ್, ಶಿವರಾಜ್ ತಂಗಡಗಿ, ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನೂ ಆಮಂತ್ರಿಸಲಾಯಿತು.
ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಎಸ್‌ಪಿ ವಿಷ್ಣುವರ್ಧನ್, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ, ಪಾಲಿಕೆ ಅಧೀಕ್ಷಕ ಇಂಜಿನಿಯರ್ ಸಿಂಧು ಮತ್ತು ಸ್ವಾಗತ ಸಮಿತಿಯ ಎಲ್ಲ ಅಧಿಕಾರಿಗಳು ಇದ್ದರು.