

ಮೈಸೂರು: ಅದಮ್ಯ ರಂಗಶಾಲೆ ವತಿಯಿಂದ ಜೂನ್ 7ರಿಂದ ಒಂದು ವರ್ಷ ಅವಧಿಯ ವಾರಾಂತ್ಯ ಅಭಿನಯ ಕಾರ್ಯಾಗಾರ ಹಾಗೂ ರಂಗ ತರಬೇತಿ ಕೋರ್ಸ್ ಆರಂಭವಾಗಲಿದ್ದು, ರಂಗಾಸಕ್ತ ಮಕ್ಕಳಿಂದ ನೋಂದಣಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಾರ್ಯದರ್ಶಿ ಚಂದ್ರು ಮಂಡ್ಯ ತಿಳಿಸಿದರು.
ಶಾಲಾ ಪಠ್ಯಪುಸ್ತಕದಲ್ಲಿನ ವಸ್ತುವಿಷಯಗಳನ್ನು ಬೋಧಿಸಲು ಚಟುವಟಿಕೆಯುಕ್ತ ಕಲಿಕಾ ವಿಧಾನ ಅತ್ಯಂತ ಯಶಸ್ವಿದಾಯಕ. ಈ ಹಿನ್ನೆಲೆಯಲ್ಲಿಯೇ ಪಠ್ಯ ವಸ್ತು ಕಲಿಕೆಗೆ ನಾಟಕ ಅಥವಾ ರಂಗ ಮಾಧ್ಯಮವನ್ನು ಅಳವಡಿಸಲಾಗಿದೆ. ಇದು ಅತ್ಯಂತ ಪರಿಣಾಕಾರಿ ಕಲಿಕೆಯ ವಿಧಾನವಾಗಿದ್ದು, ಮಕ್ಕಳಿಗೆ ಅತ್ಯಂತ ಆಕರ್ಷಣೀಯವಾಗಿದೆ. ಅವರಲ್ಲಿ ಕಲಿಕಾಸಕ್ತಿಯ ಕೆರಳಿಸಿ, ಕಲಿಕಾ ವಿಷಯವನ್ನು ಮನೋ-ಅಂತರ್ಗತ ಮಾಡುವ ಅತ್ಯುತ್ತಮ ಮಾರ್ಗೋಪಾಯವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದಕ್ಕೆ ಪೂರಕವಾಗಿ ಅದಮ್ಯದ ಮುಂದಿನ ಭಾಗವಾಗಿ ಒಂದು ವರ್ಷ ಅವಧಿಯ ವಾರಾಂತ್ಯ ಮಕ್ಕಳ ಅಭಿನಯ ಮತ್ತು ರಂಗ ತರಬೇತಿ ಕಾರ್ಯಗಾರವನ್ನು ಕುವೆಂಪು ರಂಗಮಂದಿರ, ವಿವೇಕಾನಂದ ಪದವಿ ಪೂರ್ವ ಕಾಲೇಜು ಆವರಣ, ಜಯಲಕ್ಷ್ಮಿಪುರಂ, ಮೈಸೂರು ಸಂಘಟಿಸಲಿದೆ. ಆಸಕ್ತ ಪೋಷಕರು ತಮ್ಮ ಮಕ್ಕಳನ್ನು ಜೂನ್ 7 ರ ಒಳಗೆ ದಾಖಲಿಸಿ ಪ್ರವೇಶಾತಿಯನ್ನು ಪಡೆದಿರಬೇಕು. ಅಭಿನಯ, ರಂಗ ಸಂಗೀತ, ಆಂಗಿಕ ಚಲನೆ, ಧ್ವನಿ ಬಳಕೆ ಮತ್ತು ಪರಿಷ್ಕರಣೆ, ಪ್ರಸಾದನ, ಬೆಳಕು, ರಂಗವಿನ್ಯಾಸ, ಪರಿಕರ ನಿರ್ಮಾಣ, ರಂಗ ಇತಿಹಾಸ, ನಾಟಕ ತಯಾರಿ, ನಾಟಕ ಪ್ರದರ್ಶನ ಸೇರಿದಂತೆ ರಂಗಭೂಮಿಯ ಮತ್ತು ಸಿನಿಮಾ ಮಾಧ್ಯಮದ ಬೇರೆ ಬೇರೆ ಆಯಾಮಗಳ ಕುರಿತು ಪರಿಚಯಾತ್ಮಕ ಪ್ರಾಯೋಗಿಕ ತರಗತಿಗಳು ನಡೆಯಲಿದ್ದು, ನುರಿತ ರಂಗಭೂಮಿಯ ಸಂಪನ್ಮೂಲ ಶಿಕ್ಷಕರು ತರಬೇತಿ ನೀಡಲಿದ್ದಾರೆ ಎಂದರು.
ಪ್ರತಿ ಶುಕ್ರವಾರ ಮತ್ತು ಶನಿವಾರ ತರಗತಿ ನಡೆಯಲಿದ್ದು, ಶುಕ್ರವಾರ ಸಂಜೆ 6 ರಿಂದ 8-30ರವರೆಗೆ ಶನಿವಾರ ಸಂಜೆ 5-30 ರಿಂದ 8-30 ರವರೆಗೂ ತರಗತಿಗಳು ನಡೆಯಲಿವೆ. ಕಾರ್ಯಾಗಾರಕ್ಕೆ ಗರಿಷ್ಠ 25 ಮಂದಿ ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಎಂದರು.
ಮಕ್ಕಳ ವಯೋಮಿತಿ 5 ವರ್ಷದಿಂದ 13 ವರ್ಷವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ಚಂದ್ರು ಮಂಡ್ಯ ಅವರ ದೂರವಾಣಿ ಸಂಖ್ಯೆ 8660103141 ಸಂಪರ್ಕಿಸಬಹುದು.