

ಧಾರವಾಡ: ರಾಜ್ಯ ಸರ್ಕಾರದಿಂದ ಜಿಲ್ಲೆಯ 8 ತಾಲೂಕುಗಳ 14 ಹೋಬಳಿಗಳಲ್ಲಿ 2024ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ ಎಂ. ತಿಳಿಸಿದ್ದಾರೆ.
ಪ್ರಕಟಣೆ ನೀಡಿರುವ ಅವರು, ಹೋಬಳಿ ಮಟ್ಟದಲ್ಲಿ ಭತ್ತ, ಮುಸುಕಿನ ಜೋಳ, ಶೇಂಗಾ, ಹತ್ತಿ, ಈರುಳ್ಳಿ, ಆಲೂಗಡ್ಡೆ, ಟೊಮ್ಯಾಟೊ ಹಾಗೂ ಕೆಂಪು ಮೆಣಸಿನಕಾಯಿ ಬೆಳೆಗಳು ನೀರಾವರಿ ಮತ್ತು ಮಳೆ ಆಶ್ರಿತ ಬೆಳೆಗಳಾಗಿವೆ. ಜೋಳ, ಸಾವೆ, ಉದ್ದು, ತೊಗರಿ, ಹೆಸರು ಹಾಗೂ ಸೋಯಾಅವರೆ ಬೆಳೆಗಳು ಮಳೆ ಆಶ್ರಿತ ಬೆಳೆಗಳಾಗಿವೆ.
ಧಾರವಾಡ ಮತ್ತು ಅಳ್ನಾವರ ತಾಲೂಕಿನ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಭತ್ತ, ಕಲಘಟಗಿ ತಾಲೂಕಿನಲ್ಲಿ ಭತ್ತ ಮತ್ತು ಮುಸುಕಿನಜೋಳ, ಹುಬ್ಬಳ್ಳಿ ಮತ್ತು ಹುಬ್ಬಳ್ಳಿ ನಗರ ತಾಲೂಕಿನಲ್ಲಿ ಶೇಂಗಾ, ಕುಂದಗೋಳ ತಾಲೂಕಿನಲ್ಲಿ ಶೇಂಗಾ ಮತ್ತು ಹತ್ತಿ, ನವಲಗುಂದ ಮತ್ತು ಅಣ್ಣಿಗೇರಿ ತಾಲೂಕಿನಲ್ಲಿ ಮುಸುಕಿನಜೋಳ ಮತ್ತು ಹೆಸರು ಮಳೆ ಆಶ್ರಿತ ಬೆಳೆಗಳಾಗಿವೆ. ಬೆಳೆಸಾಲ ಪಡೆಯುವ ಹಾಗೂ ಪಡೆಯದ ರೈತರು ಜು. 31ರೊಳಗೆ ಅರ್ಜಿ ಸಲ್ಲಿಸಬೇಕು. ನೀರಾವರಿ ಹಾಗೂ ಮಳೆ ಆಶ್ರಿತ ಬೆಳೆಗೆ ಕೆಂಪು ಮೆಣಸಿನಕಾಯಿ ಬೆಳೆಗೆ ನೋಂದಾಯಿಸಿಕೊಳ್ಳಲು ಆ. 16 ಕೊನೆಯ ದಿನ.
ಮಾಹಿತಿಗೆ ಬೆಂಗಳೂರಿನ ಅಗ್ರಿಕಲ್ಚರಲ್ ಇನ್ಶುರೆನ್ಸ್ ಕಂಪನಿ, ಕೃಷಿ, ಕಂದಾಯ, ಗ್ರಾಮೀಣ ಅಭಿವೃದ್ಧಿ, ತೋಟಗಾರಿಕೆ ಇಲಾಖೆ, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್, ಸೇವಾ ಬ್ಯಾಂಕ್‌ಗಳನ್ನು ಸಂಪರ್ಕಿಸಬೇಕು ಎಂದು ಡಾ. ಕಿರಣಕುಮಾರ ತಿಳಿಸಿದ್ದಾರೆ.