

ಹೊಸದುರ್ಗ: ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರು ಜನರ ಟೀಕೆಗೆ ಗಮನಕೊಡದೆ, ಬೈದವರನ್ನು ಬಂಧುಗಳೆಂದು ತಮ್ಮ ಕೆಲಸ ಮಾಡುವ ಪ್ರವೃತ್ತಿ ಬೆಳಸಿಕೊಳ್ಳಬೇಕು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಕಸಪಾ ಜಿಲ್ಲಾ ಘಟಕಗಳಿಂದ ಅಂತರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಸಾಣೇಹಳ್ಳಿಯ ಮಠದಲ್ಲಿ ಭಾನುವಾರ ಅಹ್ವಾನ ಸ್ವೀಕರಿಸಿ ಮಾತನಾಡಿದರು.
ಯಾವುದೇ ಕೆಲಸ ಮಾಡಿದರೂ ಜನರಿಂದ ನಕಾರಾತ್ಮಕ ಹಾಗೂ ಸಕಾರಾತ್ಮಕ ಅಭಿಪ್ರಾಯಗಳು ಬರುವುದು ಸಹಜ. ಅಂತಹ ಟೀಕೆಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇಂತಹ ಜನರ ಟೀಕೆಗಳಿಗೆ ಗಮನ ಕೊಡದೆ ತಮ್ಮ ಕೆಲಸ, ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.
ಡಿಸೆಂಬರ್ 30 ಹಾಗೂ 31ರಂದು ನಡೆಯಲಿರುವ ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಮ್ಮನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಅತಂಕ ಉಂಟು ಮಾಡಿದೆ. ಕಾರ್ಯಕ್ರಮಕ್ಕೆ ಸಮಯ ಪ್ರಜ್ಞೆ ತುಂಬಾ ಮುಖ್ಯ. ಕಾಲಪ್ರಜ್ಞೆಯನ್ನು ಅರಿತು ಕಾರ್ಯಕ್ರಮ ಆಯೋಜಿಸಿದರೆ ಯಶಸ್ವಿಯಾಗುತ್ತದೆ ಎಂದು ಸಂಘಟಕರಿಗೆ ಕಿವಿಮಾತು ಹೇಳಿದರು.
ತರಳಬಾಳು ಲಿಂಗೈಕ್ಯ ಶಿವಕುಮಾರ ಶ್ರೀಗಳು ಸಮಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಸಮಯ ಪ್ರಜ್ಞೆಯನ್ನಿಟ್ಟುಕೊಂಡು ಸಮಾಜ ಕಟ್ಟುವ ಕೆಲಸ ಮಾಡಿದರು. ಸಮಯದ ಕುರಿತು ಅರಿವಿಲ್ಲದವರು ಬಾಲವಿಲ್ಲದ ಕೋತಿಯಂತೆ. ಅದರ್ಶಗಳು ಬೇರೆಯವರಿಗೆ ಅದರ್ಶವಾಗುವ ಮೊದಲು ನಮಗೆ ದಾರಿದೀಪವಾಗಬೇಕು ಎಂದರು.
ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ಬಾಪೂಜಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಎಂ.ವೀರೇಶ, ಸ್ವಾಗತ ಸಮಿತಿ ಅಧ್ಯಕ್ಷ ಎ.ಸಿ.ಚಂದ್ರಪ್ಪ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಕೆಪಿಎಂ ಗಣೇಶಯ್ಯ, ಸಿ.ಲೋಕೇಶ್, ತಾಲೂಕಾಧ್ಯಕ್ಷರಾದ ಎಂ.ಶಿವಮೂರ್ತಿ, ಡಾ.ನಾಗೇಶ, ಬಿ.ಪಿ.ಓಂಕಾರಪ್ಪ ಮತ್ತಿತರಿದ್ದರು.
ಸ್ವಾಮಿತ್ವವೇ ದೊಡ್ಡ ಪದವಿ: ತರಳಬಾಳು ಹಿರಿಯ ಜಗದ್ಗುರು ಶಿವಕುಮಾರ ಶ್ರೀಗಳು ಡಾಕ್ಟರೆಟ್ ಪದವಿ ವಿಚಾರ ಬಂದಾಗ ಸ್ವಾಮಿತ್ವಕ್ಕಿಂತ ಹೆಚ್ಚಿನ ಪದವಿ ಬೇಕೆ ಎಂದು ಪ್ರಶ್ನೆ ಮಾಡಿದ್ದರು. ಅದೆ ಪರಂಪರೆಯಲ್ಲಿ ನಾವು ನಡೆಯುತ್ತಿದ್ದೇವೆ. ನಮಗೆ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಹೆಚ್ಚು ನೆಮ್ಮದಿ ಎಂದು ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ವಿನೂತನ ಪ್ರಯತ್ನ: ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಅಂತರ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಥಮ ಮತ್ತು ವಿನೂತನ ಪ್ರಯತ್ನವಾಗಿದೆ. ಇದರಿಂದ ಎರಡು ಜಿಲ್ಲೆಗಳ ನಡುವೆ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ವಿನಿಮಿಯ ಸಾಧ್ಯವಿದೆ.- ಸೂರಿ ಶ್ರೀನಿವಾಸ್, ಜಿಲ್ಲಾಧ್ಯಕ್ಷ, ಕಸಾಪ, ಚಿಕ್ಕಮಗಳೂರು
ಪ್ರಯೋಗ: ಸಾಣೆಹಳ್ಳಿ ಮಠವು ಎರಡು ಜಿಲ್ಲೆಗಳ ನಡುವಿನ ಕೊಂಡಿಯಾಗಿದೆ. ಸಾಣೇಹಳ್ಳಿಯ ಸಮ್ಮೇಳನ ರಾಜ್ಯದ ಇತಿಹಾಸದಲ್ಲಿ ಹೊಸ ರೀತಿಯ ಪ್ರಥಮ ಪ್ರಯೋಗವಾಗಿದೆ. ಸಮ್ಮೇಳನದಲ್ಲಿ ಅತಿಥಿಗಳಿಗೆ ಶಾಲು, ಹಾರ ಬದಲಾಗಿ ಶ್ವೇತವಸ್ತ್ರ, ಪುಸ್ತಕಗಳು, ಬಳಕೆಗೆ ಯೋಗ್ಯವಾದ ವಸ್ತುಗಳನ್ನು ನೀಡಲಾಗುವುದು.- ಕೆ.ಎಂ.ಶಿವಸ್ವಾಮಿ ಜಿಲ್ಲಾಧ್ಯಕ್ಷ, ಕಸಾಪ, ಚಿತ್ರದುರ್ಗ