

ಮೈಸೂರು: ನಂಜನಗೂಡಿನ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಉದ್ಘಾಟನಾ ಸಮಾರಂಭಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಆಹ್ವಾನಿಸದೆ ಇರುವುದು ಖಂಡನೀಯ ಎಂದು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.
ನೂತನ ಭವನವನ್ನು ನ.28 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗಿದೆ. ಶಿಷ್ಟಾಚಾರಕ್ಕೆ ಒಳಪಡದ ಯಡಿಯೂರಪ್ಪ ಅವರನ್ನು ಆಹ್ವಾನಿಸಿ ರುವುದಕ್ಕೆ ನಮ್ಮ ಆಕ್ಷೇಪ ಇಲ್ಲ. ಯಡಿಯೂರಪ್ಪ ಅವರ ರೀತಿಯಲ್ಲಿಯೇ ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಬೇಕಾಗಿತ್ತು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಭವನವನ್ನು ಒಟ್ಟು 3.75 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಭವನಕ್ಕೆ ಒಟ್ಟು 3 ಕೋಟಿ ರೂ. ನೀಡಿದ್ದರು. ಸಚಿವ ಶ್ರೀರಾಮುಲು ಅವರು ಸಮಾಜ ಕಲ್ಯಾಣ ಸಚಿವರಾಗಿದ್ದ ಸಂದರ್ಭ ಉಳಿದ 75 ಲಕ್ಷ ರೂ.ಗಳನ್ನು ನೀಡಿದರು. ಭವನ ನಿರ್ಮಾಣಕ್ಕೆ ದೊಡ್ಡ ಮೊತ್ತದ ಕೊಡುಗೆಯನ್ನು ಸಿದ್ದರಾಮಯ್ಯ ನೀಡಿದ್ದರೂ ಅವರನ್ನು ಸಮಾರಂಭಕ್ಕೆ ಆಹ್ವಾನಿಸದೆ ಇರುವುದು ಸರಿಯಲ್ಲ. ಶಿಷ್ಟಾಚಾರವನ್ನು ಪಾಲನೆ ಮಾಡದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು ಮಾತನಾಡಿ, ನಂಜನಗೂಡಿನ ಗೌರಿಘಟ್ಟದಲ್ಲಿ 1.54 ಕೋಟಿ ರೂ.ವೆಚ್ಚದಲ್ಲಿ ನಾಯಕರ ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗಿದೆ. ದಾನಿಗಳಿಂದ ವಂತಿಗೆ ಸಂಗ್ರಹಿಸಿ ಹಾಗೂ ಜನಪ್ರತಿನಿಧಿಗಳಿಂದ ಅನುದಾನವನ್ನು ಪಡೆದು ಈ ಭವನವನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಸಮುದಾಯದ ಮುಖಂಡರನ್ನು ಕಡೆಗಣಿಸಿ ಭವನವನ್ನು ಉದ್ಘಾಟಿಸಲು ಮುಂದಾಗಿರುವುದು ಸರಿಯಲ್ಲ. ಸಮುದಾಯದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ್ತೊಂದು ದಿನಾಂಕವನ್ನು ನಿಗದಿ ಪಡಿಸಿ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಬೇಕು ಎಂದು ಆಗ್ರಹಿಸಿದರು.
ನಂಜನಗೂಡು ತಾಲೂಕಿನ ಶೇ.60 ರಷ್ಟು ಭಾಗ ನಂಜನಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಇನ್ನುಳಿದ ಭಾಗ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತದೆ. ಆದರೆ, ವರುಣ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಕಾಟಾಚಾರಕ್ಕೆ ಎಂಬಕ್ಕೆ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಆಹ್ವಾನ ಪತ್ರಿಕೆಯಲ್ಲಿ ಜಿಲ್ಲೆಯ ಉಳಿದ ಶಾಸಕರೊಂದಿಗೆ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೆಸರು ಹಾಕಲಾ ಗಿದೆ. ನಂಜನಗೂಡು ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಯ ಉದ್ಘಾಟನಾ ಸಮಾರಂಭ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಪ್ರತ್ಯೇಕ ಸ್ಥಾನಮಾನ ನೀಡಬೇಕಾಗಿತ್ತು ಎಂದು ಹೇಳಿದರು.