

ಹೊನ್ನಾಳಿ: ಮುಜರಾಯಿ ಇಲಾಖೆಗೆ ಸೇರಿದ ತಾಲೂಕಿನ ಕುಂದೂರು ಗ್ರಾಮದ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ, ಮುಳ್ಳೋತ್ಸವ, ಅಡ್ಡಪಲ್ಲಕಿ ಉತ್ಸವ ಹಾಗೂ ಕಾರ್ಣಿಕ ಸೇರಿ ಅನೇಕ ಧಾರ್ವಿುಕ ಕಾರ್ಯಕ್ರಮಗಳು ಒಂದು ವಾರಗಳ ಕಾಲ ನಡೆಯಲಿದೆ ಎಂದು ತಹಸೀಲ್ದಾರ್ ಪಟ್ಟರಾಜಗೌಡ ತಿಳಿಸಿದರು.
ತಾಲೂಕು ಕಚೇರಿಯಲ್ಲಿ ಶುಕ್ರವಾರ ಆಹ್ವಾನಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಈಗಾಗಲೇ ಮೂರು ದಿನಗಳಿಂದ ಕಂಕಣಧಾರಣೆ, ಧೂಳಿ ಉತ್ಸವ ಹಾಗೂ ನಾಗಸಪೋತ್ಸವ ನಡೆದಿದೆ. ಶನಿವಾರ ಚಿಗರಿ ವಾಹನೋತ್ಸವ, ಮಾ.24 ರ ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೆ ಆನೆ ಅಂಬಾರಿ ಉತ್ಸವ, ಮಧ್ಯಾಹ್ನ ಆಂಜನೆಯಸ್ವಾಮಿ ಬ್ರಹ್ಮ ರಥೋತ್ಸವ ನಡೆಯಲಿದೆ ಎಂದರು.
ಮಾ.25ರ ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ಮುಳ್ಳೋತ್ಸವ ಹಾಗೂ ಕಾರ್ಣಿಕ, ಮಾ.26 ರಂದು ಬೆಳಗ್ಗೆ ಓಕುಳಿ ಹಾಗೂ ರಾತ್ರಿ ಅಡ್ಡಪಲ್ಲಕ್ಕಿ ಉತ್ಸವ ನೆರವೇರಲಿದೆ. ಗ್ರಾಮದ ಮಾರುತಿ ಯುವಕ ಸಂಘದಿಂದ ಮಾ.24 ಹಾಗೂ 25 ರಂದು ಅನ್ನದಾಸೋಹ ನಡೆಯಲಿದೆ ಎಂದು ಹೇಳಿದರು.
ವಿಶೇಷ ಮನವಿ: ಶ್ರೀಕ್ಷೇತ್ರ ಸನ್ನಿಧಿಯಲ್ಲಿ ಭಕ್ತ ಮಂಡಳಿ, ಗ್ರಾಮಸ್ಥರು ಹಾಗೂ ಆಡಳಿತ ಮಂಡಳಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಧನಸಹಾಯ ಹಾಗೂ ಪೋ›ತ್ಸಾಹ ನೀಡಬೇಕು ಎಂದು ಭಕ್ತರಲ್ಲಿ ಮನವಿ ಮಾಡಿದರು.
ಬಯಲು ಜಂಗಿ ಕುಸ್ತಿ: ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಮುಳ್ಳೋತ್ಸವದ ಅಂಗವಾಗಿ ಗ್ರಾಮದಲ್ಲಿ ಪುರುಷ ಬಯಲು ಜಂಗಿ ಕುಸ್ತಿ ಕಾರ್ಯಕ್ರಮ ನಡೆಯಲಿದೆ ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ.
ದೇವಾಲಯದ ಸಮಿತಿ ಪ್ರಮುಖರಾದ ಶೇಖರಪ್ಪ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಕುಮಾರ್, ಗುರುರಾಜ್, ತಿಪ್ಪೇಶಪ್ಪ, ಗ್ರಾಪಂ ಸದಸ್ಯ ಧನಂಜಯ್, ರಾಜಸ್ವ ನಿರೀಕ್ಷಕ ಬಸವರಾಜು, ದೇವಸ್ಥಾನದ ಆಡಳಿತಾಧಿಕಾರಿ ಗಣೇಶ್ ಸೇರಿ ಅನೇಕರು ಉಪಸ್ಥಿತರಿದ್ದರು.