

ಕಳಸ: ಕಳಸದಲ್ಲಿ 18 ರಂದು ನಡೆಯುವ ರಾಜ್ಯ ಮಟ್ಟದ ಪ್ರಥಮ ಜೈನ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಕಳಸ ಚಂದ್ರನಾಥ ಸ್ವಾಮಿ ಬಸದಿಯ ಆವರಣದಲ್ಲಿ ಬಿಡುಗಡೆಗೊಳಿಸಲಾಯಿತು.
ಚಂದ್ರನಾಥ ಸ್ವಾಮಿ ಬಸದಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಸಿ.ಧರಣೇಂದ್ರ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, 18 ರಿಂದ 22ರವರೆಗೆ ಚಂದ್ರನಾಥ ಸ್ವಾಮಿ ಬಸದಿಯ ಪಂಚಕಲ್ಯಾಣ ಮಹೋತ್ಸವ ನಡೆಯಲಿದ್ದು, ಈ ಕಾರ್ಯಕ್ರಮದ ಮೊದಲನೇ ದಿನ ರಾಜ್ಯಮಟ್ಟದ ಜೈನ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಡಾ.ಶ್ರೀವರ್ಮ ಹೆಗ್ಗಡೆ ಸಮ್ಮೇಳನಾಧ್ಯಕ್ಷರಾಗಿದ್ದು, ಅಂದು ಬೆಳಗ್ಗೆ ಮಹಾವೀರ ವೃತ್ತದಿಂದ ಬಸದಿಯವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ನಂತರ ಉದ್ಘಾಟನಾ ಸಮಾರಂಭ, ಇತಿಹಾಸ ಗೋಷ್ಠಿ, ಕವಿಗೋಷ್ಠಿ ನಂತರ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಜೈನ್ ವಿದ್ವಾಂಸ ಡಾ.ಅಪ್ಪಣ್ಣ ಹಂಜೆ ಗದಗ, ಲೇಖಕಿ ಡಾ. ಪದ್ಮಿನಿ ನಾಗರಾಜು ಬೆಂಗಳೂರು, ಸಾಹಿತಿ ದೇವೇಂದ್ರಪ್ಪ ಎನ್.ಅಕ್ಕಿ ವಿಜಯಪುರ ಇವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ, 19 ಜನರಿಗೆ ಕನ್ನಡ ಸಿರಿ ಪ್ರಶಸ್ತಿ ನೀಡಲಾಗುವುದು. ನಾಡಿನ ಹೆಸರಾಂತ ಸಾಹಿತಿಗಳು, ಲೇಖಕರು, ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಅ.ರಾ.ಸತೀಶ್ಚಂದ್ರ, ಮಹಿಳಾ ಘಟಕ ಅಧ್ಯಕ್ಷೆ ಮಮ್ತಾಜ್ ಬೇಗಂ, ಜಿಲ್ಲಾ ಸಂಚಾಲಕ ಪಾಂಡುರಂಗ, ಹೆಚ್.ಸಿ.ಅಣ್ಣಯ್ಯ, ನಿರ್ಮಲ ಕುಮಾರ್, ಎಚ್.ಡಿ.ಜ್ವಾಲನಯ್ಯ, ಗೀತಾ ಮಕ್ಕಿಮನೆ, ಸುಮನಾ ಜಯರಾಜ್, ಅಜಿತ್ ಪ್ರಸಾದ್, ರಜಿತ್ ಕೆಳಗೂರು ಇತರರು ಇದ್ದರು.