ರಾಸಾಯನಿಕ ಗೊಬ್ಬರ ಆರೋಗ್ಯಕ್ಕೆ ಮಾರಕ

23nmt2-photo
Published on

ನ್ಯಾಮತಿ: ರಾಸಾಯನಿಕ ಗೊಬ್ಬರ ಬಳಸಿದ ಆಹಾರ ಪದಾರ್ಥಗಳ ಸೇವನೆಯಿಂದ ಅಗತ್ಯ ಪೋಷಕಾಂಶಗಳು ದೊರೆಯದೇ, ಮನುಷ್ಯನ ಬೆಳವಣಿಗೆ ಜತೆಗೆ ದೇಶದ ಅಭಿವೃದ್ಧಿ ಕೂಡ ಕುಂಠಿತವಾಗುತ್ತದೆ ಎಂದು ಸಿದ್ಧಗಿರಿ ಕ್ಷೇತ್ರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಪೇಟೆ ಬಸವೇಶ್ವರ ದೇವಾಲಯದ ಆವರಣದಲ್ಲಿ ಶುಕ್ರವಾರ ಲಿಂ.ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಹೊನ್ನಾಳಿ ಹಿರೇಕಲ್ಮಠದ ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ರಾಂಪುರ ಬೃಹನ್ಮಠದ ಲಿಂ.ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳ ಸ್ಮರಣಾರ್ಥ ಹಮ್ಮಿಕೊಂಡಿದ್ದ ಸಾವಯವ ಕೃಷಿಯಿಂದಲೇ ಸದೃಢ ಭಾರತ ನಿರ್ವಣದ ಬೃಹತ್ ಜನಜಾಗೃತಿ ಸಮಾರಂಭ, ಶ್ರೀ ಪೇಟೆ ಬಸವೇಶ್ವರ ಸಮುದಾಯ ಭವನದ ಎರಡನೇ ಹಂತದ ಕಟ್ಟಡ ಕಾರ್ಯ, ಜೀವನಾಮೃತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿರಿಯರು ಶತಾಯುಶಿಗಳಾಗಿ ಆರೋಗ್ಯದಿಂದ ಬದುಕುತ್ತಿದ್ದರು. ಅವರಿಗೆ ಗುಡ್ಡ, ಬೆಟ್ಟಗಳನ್ನು ಹತ್ತುವುದು ಸುಲಭದ ಕೆಲಸವಾಗಿತ್ತು. ಈಗಿನ ಕಾಲದ ಜನರಿಗೆ ನಡೆಯುವುದೇ ಕಷ್ಟವಾಗಿದೆ. ಇದೆಲ್ಲದಕ್ಕೂ ಕಾರಣ ಆಹಾರ ಪದ್ಧತಿ. ಇನ್ನಾದರೂ ಪೂರ್ವಿಕರ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಆರೋಗ್ಯಕರ ಆಹಾರ ನೀಡಬೇಕು ಎಂದು ರೈತರಿಗೆ ಸಲಹೆ ನೀಡಿದರು.

ಹಿಂದೆ ರೈತ ತಾನು ಬೆಳೆದ ಬೆಳೆಗಳಿಂದ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದ. ಕೃಷಿಯ ಜತೆಗೆ ಹೈನುಗಾರಿಕೆ ಮಾಡಿ ಅದರ ಗೊಬ್ಬರವನ್ನು ಜಮೀನುಗಳಿಗೆ ಬಳಸುತ್ತಿದ್ದರು. ಈಗ ರೈತ ಕಷ್ಟಪಟ್ಟರೂ ನೆಮ್ಮದಿ ಇಲ್ಲದಂತಾಗಿದೆ. ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದು, ಹಣ ಗಳಿಕೆ ದೃಷ್ಟಿಯಿಂದ ಹಂದಿ ಮುಖದ ಹಸುಗಳನ್ನು ಸಾಕುತ್ತಿದ್ದಾರೆ. ಈ ಪದ್ಧತಿ ಬಿಟ್ಟು ದೇಶಿಯ ತಳಿಯ ಹಸುಗಳನ್ನು ಸಾಕಿ ಸಗಣಿ, ಗೋಮೂತ್ರದಿಂದ ಉಪಯೋಗ ಪಡೆದು ಹಾಲು, ಮೊಸರು, ಮಜ್ಜಿಗೆ ತಿಂದು ಆರೋಗ್ಯವನ್ನು ಕಾಪಾಡಿಕೊಳ್ಳಿರಿ ಎಂದು ಹೇಳಿದರು.

ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಜಿಪಂ ಮಾಜಿ ಸದಸ್ಯ ಡಿ.ಜಿ. ವಿಶ್ವನಾಥ ಮಾತನಾಡಿದರು. ಅಧ್ಯಕ್ಷತೆಯನ್ನು ಯಲಬುರ್ಗಿ ಸಂತೋಷ್​ಕುಮಾರ್ ವಹಿಸಿದ್ದರು.

ಮಲೆಬೆನ್ನೂರು ಶ್ರೀವೀರಭದ್ರೇಶ್ವರ ದೇವಾಲಯ ಧರ್ಮದರ್ಶಿ ಬಿ. ಚಿದಾನಂದಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜೆ. ವಾಗೀಶ್ ನುಚ್ಚಿನ, ತಾಪಂ ಮಾಜಿ ಅಧ್ಯಕ್ಷ ಎಸ್.ಪಿ. ರವಿಕುಮಾರ್, ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಕೋಡಿಕೊಪ್ಪ ಜಿ. ಶಿವಪ್ಪ, ಬಳೆಗಾರ್ ಮಲ್ಲಿಕಾರ್ಜುನ್, ಶೆಟ್ರು ವೀರಣ್ಣ, ಡಾ. ಬಸವರಾಜಪ್ಪ, ಮಾಸ್ಟಿ ಮೀನಾಕ್ಷಮ್ಮ, ಬಾರೆ ಮರದ ಚನ್ನೇಶ್ ಇತರರು ಇದ್ದರು.

ಕವಿತಾ ನಿರೂಪಿಸಿದರು. ಮಹಿಳಾ ಘಟಕದವರು ಪ್ರಾರ್ಥಿಸಿದರು. ಚಿಟ್ಟೂರು ಸಂಜುಕುಮಾರ್ ಸ್ವಾಗತಿಸಿದರು. ಚನ್ನಗಿರಿ ಶಶಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net