

ಗಂಗಾವತಿ: ಉಪನ್ಯಾಸಕ ಹುದ್ದೆ ಪವಿತ್ರವಾಗಿದ್ದು, ವಿದ್ಯಾರ್ಥಿಗಳ ಆಸಕ್ತಿ ಅನುಗುಣ ಬೋಧನೆ ಪದ್ಧತಿಯನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ರಾಜ್ಯ ಪ.ಪೂ.ಕಾಲೇಜುಗಳ ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ ಹೇಳಿದರು.
ನಗರ ಎಸ್‌ಕೆಆರ್ ಪ.ಪೂ.ಕಾಲೇಜು ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಪ.ಪೂ.ಕಾಲೇಜುಗಳ ಉಪನ್ಯಾಸಕರಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಭೌತಶಾಸ ವಿಷಯಾಧಾರಿತ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ತರಗತಿಗೆ ಪ್ರವೇಶಿಸುವ ಅಧ್ಯಾಪಕರು ಪ್ರತಿ ನಿಮಿಷಕ್ಕೂ ಹೊಸತನವನ್ನು ಸಾಧಿಸಬೇಕಿದೆ. ವಿದ್ಯಾರ್ಥಿಗಳಲ್ಲಿ ನವಚೈತನ್ಯ ಮೂಡಿಸುವ ಬೋಧನಾ ಕಲೆ ಕರಗತ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ರಾಜ್ಯ ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮಶೇಖರ ಗೌಡ ಮಾತನಾಡಿ, ಕಾರ್ಯಾಗಾರದ ಉದ್ದೇಶವನ್ನು ಬೋಧನೆ ಮೂಲಕ ವಿದ್ಯಾರ್ಥಿಗಳಿಗೆ ತಲುಪಬೇಕಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಎಸ್‌ಕೆಆರ್ ಪ.ಪೂ.ಕಾಲೇಜಿನ ಪ್ರಾಚಾರ್ಯ ಶಿವಾನಂದ ಮೇಟಿ ಮಾತನಾಡಿದರು. ಉಪನ್ಯಾಸಕರಾದ ಚಿದಾನಂದ ಮೇಟಿ, ಅಮೀನಾ ಬೇಗಂ ಇತರರಿದ್ದರು.