ರಾಜ್ಯಕ್ಕೆ ಹೂಡಿಕೆ ಹರಿವು, ಸದ್ಯದಲ್ಲೇ ದೇಶದಲ್ಲಿ 2ನೇ ಸ್ಥಾನಕ್ಕೆ: ಸಿಎಂ ಸಿದ್ದರಾಮಯ್ಯ

imm prgm
Published on

ಬೆಂಗಳೂರು: ಕೈಗಾರಿಕಾ ಕ್ಷೇತ್ರದ ಬಂಡವಾಳ ಹೂಡಿಕೆಯಲ್ಲಿ ರಾಜ್ಯವು ಸದ್ಯಕ್ಕೆ ದೇಶದಲ್ಲಿ 3ನೇ ಸ್ಥಾನದಲ್ಲಿದ್ದು, 2025ರ ಜೂನ್ ವೇಳೆಗೆ 2ನೇ ಸ್ಥಾನಕ್ಕೆ ಏರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ಆಯೋಜನೆಗೊಂಡಿರುವ ಇಂಡಿಯನ್ ಇನ್‌ಸ್ಟ್ಟಿಟ್ಯೂಟ್ ಆಫ್​ ಮೆಟಲ್ಸ್ (ಐಐಎಂ) ಸಂಸ್ಥೆಯ 78ನೇ ವಾರ್ಷಿಕ ತಾಂತ್ರಿಕ ಸಮಾವೇಶ ಉದ್ಘಾಟಿಸಿ ಬುಧವಾರ ಮಾತನಾಡಿದರು.

ಪ್ರಸ್ತುತ 54,427 ಕೋಟಿ ರೂ. ಹೂಡಿಕೆಯ ಜತೆಗೆ ಮುಂದಿನ 6-7 ತಿಂಗಳಲ್ಲಿ ಇನ್ನೂ 19,059 ಸಾವಿರ ಕೋಟಿ ರೂ. ಬಂಡವಾಳ ಹರಿದು ಬರುವುದು ಖಾತ್ರಿಯಾಗಿದೆ. ಈ ಮೂಲಕ ರಾಜ್ಯವು 73 ಸಾವಿರ ಕೋಟಿ ರೂ. ಗಳಿಗೂ ಹೆಚ್ಚಿನ ಹೂಡಿಕೆಯನ್ನು ಕಾಣಲಿದೆ. ರಾಜ್ಯವು ಈ ವರ್ಷ ಈಗಾಗಲೇ 21 ವಿವಿಧ ಉದ್ಯಮಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಇದರಿಂದ 46,375 ಕೋಟಿ ರೂ. ಬಂಡವಾಳ ಹರಿದು ಬರಲಿದ್ದು, 27 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಗಳ ಮೂಲಕ 90 ಸಾವಿರ ಕೋಟಿ ರೂ. ಗೂ ಹೆಚ್ಚಿನ ಹೂಡಿಕೆ ಆಗಲಿರುವಂತಹ ಒಟ್ಟು 669 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ಕೊಡಲಾಗಿದೆ. ಇವುಗಳಿಂದ 1.73 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೆಟಲ್ಸ್ ಮತ್ತು ಮೆಟೀರಿಯಲ್ಸ್ ಕ್ಷೇತ್ರವೂ ಸೇರಿ ಎಲ್ಲ ವಲಯಗಳಲ್ಲೂ ಕರ್ನಾಟಕವು ಪರಿಸರ ಸ್ನೇಹಿ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ. ಲೋಹ ಮತ್ತು ಅದಕ್ಕೆ ಪೂರಕವಾದ ವಲಯಗಳು ಆರ್ಥಿಕ ಅಭಿವೃದ್ಧಿಯ ಆಚೆಗೂ ತಮ್ಮ ಪ್ರಭಾವ ಬೀರುತ್ತವೆ. ಕ್ಷಿಪ್ರವಾಗಿ ಬೆಳವಣಿಗೆ ಕಾಣುತ್ತಿರುವ ಜಗತ್ತಿನಲ್ಲಿ ಉದ್ಭವಿಸುತ್ತಿರುವ ಸಂಕೀರ್ಣ ಸಮಸ್ಯೆಗಳಿಗೆ ಉದ್ಯಮಿಗಳು ಸರಿಯಾದ ಪರಿಹಾರವನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದು ಸಿಎಂ ತಿಳಿಸಿದ್ದಾರೆ.

ಸರ್ಕಾರದಿಂದ ಸಮರ್ಥ ನೀತಿ:

ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ರಾಜ್ಯ ಸರಕಾರವು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮಾತ್ರವಲ್ಲದೆ ಸೆಮಿಕಂಡಕ್ಟರ್, ವಿದ್ಯುನ್ಮಾನ, ಚಿಪ್ ವಿನ್ಯಾಸ, ನವೋದ್ಯಮ, ವಿದ್ಯುಚ್ಚಾಲಿತ ವಾಹನ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆಯೂ ಸಮರ್ಥ ನೀತಿ ಹೊಂದಿದೆ. ಪ್ರತಿಭಾವಂತ ಮಾನವ ಸಂಪನ್ಮೂಲವನ್ನು ಕೌಶಲಪೂರ್ಣವನ್ನಾಗಿಸಿ, ಅವರೆಲ್ಲರನ್ನೂ ಉದ್ಯೋಗಕ್ಕೆ ಅರ್ಹರನ್ನಾಗಿ ಸಜ್ಜುಗೊಳಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಐಐಎಂ ಅಧ್ಯಕ್ಷ ಸಜ್ಜನ್ ಜಿಂದಾಲ್, ಜಿಂದಾಲ್ ಅಧ್ಯಕ್ಷ ಪಿ.ಕೆ.ಮುರುಗನ್ ಮತ್ತಿತರರು ಹಾಜರಿದ್ದರು.

ಉದ್ಯಮ ಕ್ಷೇತ್ರದಲ್ಲಿ ಈಗ ಡಿಜಿಟಲ್ ಉತ್ಪಾದನೆ, ಕೃತಕ ಬುದ್ಧಿಮತ್ತೆ ಮತ್ತು ಆಟೋಮೇಶನ್ ನಿರ್ಣಾಯಕವಾಗಿದ್ದು, ಹೊಸ ಬಗೆಯ ಶಕ್ತಿಸಾಮರ್ಥ್ಯ ತಂದುಕೊಟ್ಟಿವೆ. ಸುಧಾರಿತ ಅಲಾಯ್ಸ, ಅತ್ಯಧಿಕ ಸಾಮರ್ಥ್ಯದ ಉಕ್ಕು ಮತ್ತು ಸುಸ್ಥಿರ ಮೆಟೀರಿಯಲ್ಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಈ ವಲಯದಲ್ಲಿ ರಾಜ್ಯದ ಹಲವು ನವೋದ್ಯಮಗಳು ವೈಮಾಂತರಿಕ್ಷ, ಹಗುರ ಅಲಾಯ್ಗಳಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿವೆ.

- ಎಂ.ಬಿ. ಪಾಟೀಲ್, ಕೈಗಾರಿಕಾ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net