

ವಿಜಯವಾಣಿ ಸುದ್ದಿಜಾಲ ಉಡುಪಿ
ಶಾಲೆಯಲ್ಲಿ ಕಲಿಯುವ ಮಕ್ಕಳು ಶಾಶ್ವತವಾದ ಅಗ್ನಿ(ಬೆಳಕು)ಯನ್ನು ಗಳಿಸಿಕೊಳ್ಳುತ್ತಾರೆ. ಆತ್ಮ ಸಾಕ್ಷಿಯ ಅಗ್ನಿ, ವಿನಯದ ಅಗ್ನಿ, ಒಡಲಾಗ್ನಿ ಎಲ್ಲವೂ ಸಹ ಲೋಕೋದ್ಧಾರಕ್ಕಾಗಿ ಶಾಲೆಗಳು ಮಕ್ಕಳನ್ನು ತರಬೇತುಗೊಳಿಸುತ್ತವೆ. ಜ್ಞಾನವಂತರಾದರೆ ಜಗತ್ತನ್ನು ಜಯಿಸಬಹುದು. ಹೀಗಾಗಿ ಪ್ರತಿ ಮಕ್ಕಳೂ ಸಂಹ ನಾಡಿನ ಅಗ್ನಿದಿವ್ಯವಾಗಬೇಕು ಎಂದು ಹಿರಿಯ ಪತ್ರಕರ್ತ ಜಿ.ಯು. ಭಟ್ ಹೊನ್ನಾವರ ಆಶಯ ವ್ಯಕ್ತ ಪಡಿಸಿದರು.
ಕುಂದಾಪುರ ತಾಲೂಕಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿ ಸಂಸತ್ ಪದಗ್ರಹಣ ಮತ್ತು ಕವಿ ಮುದ್ದಣ ಕಲೆ ಮತ್ತು ಸಾಹಿತ್ಯ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಭಾರತೀಯತೆಯ ಶಿಕ್ಷಣ ವ್ಯವಸ್ಥೆಯೇ ಸಂಪೂರ್ಣ ನಾಶವಾಗಿದೆ. ಆ ಪದ್ಧತಿಯ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳೂ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹಟ್ಟಿಯಂಗಡಿಯಲ್ಲಿ ಜ್ಞಾನದಾಯಕನಾದ ಸಿದ್ಧಿವಿನಾಯಕನ ಸನ್ನಿಧಿಯಲ್ಲಿ ದೇವಾಲಯದ ರೀತಿಯಲ್ಲಿ ಶಾಲೆ ಮುನ್ನಡೆಸಲಾಗುತ್ತಿದೆ. ಇಲ್ಲಿ ನಮ್ಮತನ ಕಲಿತ ಮಕ್ಕಳ ಭವಿಷ್ಯ ದೇಶವನ್ನು ಬೆಳಗುವಂತೆ ಪ್ರಜ್ವಲಿಸಲಿ ಎಂದರು.
ಸಮಾರಂಭ ಉದ್ಘಾಟಿಸಿದ ವಿಜ್ಞಾನಿ ಡಾ. ಸುರೇಂದ್ರ ಕುಲಕರ್ಣಿ ಮಾತನಾಡಿ, ಕಲಿತ ಶಿಕ್ಷಣವು ಸಮಾಜ ಮತ್ತು ದೇಶವನ್ನು ಬೆಳೆಸುವಂತೆ ಇರಬೇಕು. ಆತ್ಮವಿಶ್ವಾಸ, ಸ್ವಯಂ ಗೌರವ, ಶಿಸ್ತು ಮತ್ತು ಸಮಗ್ರತೆ ಇವು ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವ 4 ಆಧಾರ ಸ್ತಂಭಗಳು. ಅಂಧಶೃದ್ಧೆಗಳನ್ನು ಬಿಟ್ಟು ವೈಜ್ಞಾವಿಕವಾಗಿ ಕಲಿತು ಮುಂದೆ ಬರಬೇಕು. ವಿಜ್ಞಾನ ಮತ್ತು ಗಣಿತ ವಿಷಯ ಕಠಿಣವಲ್ಲ. ಅವುಗಳನ್ನು ಕಲಿತರೆ ಬದುಕು ಬಂಗಾರವಾಗುತ್ತದೆ ಎಂದರು.
ಶಾಲೆಯ ವಿದ್ಯಾರ್ಥಿ ನಾಯಕ ಹಾಗೂ ನಾಯಕಿಗೆ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಶರಣಕುಮಾರ್ ಅವರು ಬ್ಯಾಚ್ ವಿತರಿಸಿದರು. ಭಟ್ಕಳದ ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್, ಶಾಲೆಯ ಆಡಳಿತಾಧಿಕಾರಿ ವೀಣಾರಶ್ಮಿ ಎಂ., ವಿವಿಧ ಘಟಕಗಳ ವಿದ್ಯಾರ್ಥಿ ನಾಯಕ, ನಾಯಕಿಯರು ಉಪಸ್ಥಿತರಿದ್ದರು.
ಶಿಕ್ಷಕಿ ಅಶ್ವಿನಿ ವಿದ್ಯಾರ್ಥಿ ಸಂಸತ್ ಪದಾಧಿಕಾರಿಗಳ ಹಾಗೂ ವಿವಿಧ ಘಟಕಗಳ ನಾಯಕ- ನಾಯಕಿಯರ ಹೆಸರು ವಾಚಿಸಿದರು. ಶಿಕ್ಷಕಿ ಪ್ರತೀಕ್ಷಾ ಪ್ರತಿಜ್ಞಾ ವಿಧಿ ಬೋಧಿಸಿದರು.
ಐಶ್ವರ್ಯಾ ಸಂಗಡಿಗರು ಪ್ರಾರ್ಥಿಸಿದರು. ಪೂರ್ವಿ ಜಗನ್ನಾಥ ಸ್ವಾಗತಿಸಿದರು. ಕೃಪಾಲಿ ವಂದಿಸಿದರು. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.
ದೇಶ- ವಿದೇಶದ ಅನೇಕ ಶಾಲೆಗಳನ್ನು ನನ್ನ ಸೇವಾ ಅವಧಿಯಲ್ಲಿ ಭೇಟಿ ಮಾಡಿದ್ದೇನೆ. ಹಟ್ಟಿಯಂಗಡಿಯ ಈ ಶಾಲೆಯಲ್ಲಿನ ಶೈಕ್ಷಣಿಕ ವ್ಯವಸ್ಥೆ, ಶಾಲೆಯ ಪರಿಸರ, ವಿದ್ಯಾರ್ಥಿಗಳಲ್ಲಿನ ಶಿಸ್ತು ಕಂಡು ನಿಬ್ಬೆರಗಾಗಿದ್ದೇನೆ. ಯಾವುದೋ ಸೈನಿಕ ಶಾಲೆಯಲ್ಲಿ ಇದ್ದಂತೆ ಭಾಸವಾಗುತ್ತಿದೆ. ನನ್ನನ್ನು ನಾನೇ ನಂಬಲು ಸಾಧ್ಯವಾಗದ ವಿಶಿಷ್ಟ ಶಾಲೆಗೆ ಭೇಟಿ ನೀಡಿದ ಸಂತಸ ನನ್ನನ್ನು ಆವರಿಸಿದೆ. ಡಾ. ಸುರೇಂದ್ರ ಕುಲಕರ್ಣಿ. ವಿಜ್ಞಾನಿ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಲೆಯ ವಿದ್ಯಾರ್ಥಿಗಳು.