

ಕೊಪ್ಪಳ: ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ವಿರುದ್ಧ ದ್ವೇಷದ ರಾಜಕಾರಣ ನಡೆಸುತ್ತಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಆರೋಪಿಸಿದರು.
ನಗರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದರು. ಮೋದಿ ಅಧಿಕಾರಕ್ಕೆ ಬಂದು 8 ವರ್ಷಗಳಾದರೂ ಯಾವೊಂದು ಮಹತ್ತರ ಅಭಿವೃದ್ಧಿ ಕೆಲಸ ಮಾಡಿಲ್ಲ. ಬದಲಿಗೆ ದೇಶದ ಜನತೆಗೆ ಸುಳ್ಳು ಹೇಳುತ್ತಿದ್ದಾರೆ. ಜನರಿಗೆ ಇವರ ಬಂಡವಾಳ ಗೊತ್ತಾಗಿದ್ದು, ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಮತದಾರರನ್ನು ಜಾಗೃತಗೊಳಿಸಲು ಕಾಂಗ್ರೆಸ್ ಜೋಡೋ ಭಾರತ ಯಾತ್ರೆ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದೆ. ಇದರಿಂದ ಬೆಚ್ಚಿರುವ ಬಿಜೆಪಿಗರು ಇ.ಡಿ. ಅಸ್ತ್ರ ಪ್ರಯೋಗಿಸಿ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣ ಮುಗಿದಿದೆ. ದ್ವೇಷ ಸಾಧನೆಗೆ ಪ್ರಕರಣ ಮರು ತನಿಖೆಗೆ ನೀಡಲಾಗಿದೆಯೆಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಅಮರೇಗೌಡ ಬಯ್ಯಪುರ, ಶಾಸಕ ರಾಘವೇಂದ್ರ ಹಿಟ್ನಾಳ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ನಾಯಕ ಮಾತನಾಡಿದರು. ನಗರದ ಬಸವೇಶ್ವರ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಎಡಿಸಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಎಂ.ಕಾಟನ್ ಪಾಷಾ, ಮುಖಂಡರಾದ ಕೃಷ್ಣಾ ಇಟ್ಟಂಗಿ, ಅಮರೇಶ ಗೋನಾಳ, ರಮೇಶ ನಾಯಕ, ಗಾಳೆಪ್ಪ ಪೂಜಾರ, ಕಿಶೋರಿ ಬೂದನೂರ, ನವೋದಯ ವಿರೂಪಣ್ಣ ಇತರರಿದ್ದರು.