

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಬದಲಿ ನಿವೇಶನ ನೀಡಿರುವ ಕುರಿತು ಆರೋಪಗಳು ಕೇಳಿ ಬರುತ್ತಿದೆ. ನನಗೆ ಆ ಆರೋಪದ ಬಗ್ಗೆ ತಿಳಿದಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಫಿಡವಿಟ್‌ನಲ್ಲಿ ಆ ಎಲ್ಲ ನಿವೇಶನಗಳನ್ನು ಉಲ್ಲೇಖಿಸಿದ್ದಾರೆ. ಒಂದುವೇಳೆ ಸಿಎಂ ಪತ್ನಿಗೆ ಹಂಚಿಕೆಯಾಗಿರುವ ನಿವೇಶನದಲ್ಲಿ ಹಗರಣ ನಡೆದಿರುವ ಅನುಮಾನಗಳಿದ್ದರೆ ಅದರ ಬಗ್ಗೆಯೂ ತನಿಖೆ ನಡೆಯಲಿ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಆಗ್ರಹಿಸಿದರು.
ಕೇವಲ ಈಗ ನಡೆದಿರುವ ಹಗರಣ ಮಾತ್ರವಲ್ಲದೆ 2000 ಇಸವಿಯಿಂದ ಈಚೆಗೆ ನಡೆದಿರುವ ಎಲ್ಲ ಅಕ್ರಮಗಳ ಬಗ್ಗೆಯೂ ಸಮಗ್ರ ತನಿಖೆ ನಡೆಯಲಿ. ಮುಡಾ ಒಟ್ಟು 190 ಬದಲಿ ನಿವೇಶನಗಳನ್ನು ನೀಡಿದ್ದು, ಕೆಸರೆಯಲ್ಲಿ ನಿವೇಶನ ಮಂಜೂರಾ ದವರಿಗೆ ವಿಜಯನಗರದಲ್ಲಿ ನಿವೇಶನ ನೀಡಿರುವ ಉದಾಹರಣೆ ಇದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಡಾ ಆಯುಕ್ತರ ವಿರುದ್ಧ ತನಿಖೆ ಮಾಡಿ ವರದಿ ನೀಡಿ ಎಂದು ಸರ್ಕಾರ ಆದೇಶ ನೀಡಿತ್ತು. ಈ ಪ್ರಕಾರ ಜಿಲ್ಲಾಧಿಕಾರಿ ತನಿಖೆ ನಡೆಸಿ ವರದಿ ನೀಡಿದ್ದಾರೆ. ಈ ವರದಿ ಪ್ರಕಾರ ಮುಡಾ ಆಯುಕ್ತರ ವಿರುದ್ಧ ಸರ್ಕಾರದ ಹಂತದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಲು ಸಮಿತಿ ರಚಿಸುವಂತೆ ಜಿಲ್ಲಾಧಿಕಾರಿ ಶಿಫಾರಸು ಮಾಡಿದ್ದಾರೆ. ಆದರೆ, ಇದುವರೆಗೆ ಸರ್ಕಾರ ಈ ವರದಿಯನ್ನು ಬಹಿರಂಗ ಪಡಿಸಿಲ್ಲ ಎಂದು ಟಿ.ಎಸ್. ಶ್ರೀವತ್ಸ ಅಸಮಾಧಾನ ವ್ಯಕ್ತಪಡಿಸಿದ್ದಾರೆ.