ಬಾಲಕಿ ಸಾವು ತನಿಖೆಗೆ ಆದೇಶ: ಶಾಸಕ ರವಿಕುಮಾರ್ ಅಧ್ಯಕ್ಷತೆಯಲ್ಲಿ ತುರ್ತುಸಭೆ

Investigation ordered into girls death Mandya
Published on

ಮಂಡ್ಯ: ಮೂಳೆ ಮುರಿತ ಚಿಕಿತ್ಸೆ ಪಡೆಯಲು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ದಾಖಲಾಗಿದ್ದ ಮಳವಳ್ಳಿ ತಾಲೂಕು ನೆಲ್ಲೂರು ಗ್ರಾಮದ ಬಾಲಕಿ ಸಾನ್ವಿ ಸಾವಿನ ಪ್ರಕರಣ ಗಂಭೀರತೆ ಪಡೆದುಕೊಂಡಿದೆ. ಅದರಂತೆ ತನಿಖೆ ನಡೆಸುವಂತೆ ತಂಡ ರಚನೆ ಮಾಡಿ ಆದೇಶ ಹೊರಡಿಸಲಾಗಿದೆ. ಇದರ ಬೆನ್ನಲ್ಲೇ ಶಾಸಕ ರವಿಕುಮಾರ್ ಗಣಿಗ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ ನೇತೃತ್ವದಲ್ಲಿ ತುರ್ತು ಸಭೆ ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರ ನಿರ್ಲಕ್ಷ್ಯ, ನೊಂದ ಕುಟುಂಬಕ್ಕೆ ಬೇಜವಾಬ್ದಾರಿ ಉತ್ತರ, ಅತಿರೇಕದ ವರ್ತನೆ ಎನ್ನುವ ಆರೋಪ ಕೇಳಿಬಂದಿದೆ. ಮುಖ್ಯವಾಗಿ ಮೂಳೆ ಮುರಿತದ ಚಿಕಿತ್ಸೆಗೆ ಬಂದಿದ್ದ ಬಾಲಕಿ ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆನ್ನುವ ವೈದ್ಯರ ಹೇಳಿಕೆ ಅನುಮಾನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಗಂಭೀರ ಚರ್ಚೆ ಮಾಡಲಾಗಿದ್ದು, ಮಿಮ್ಸ್ ಅಧಿಕಾರಿಗಳಿಗೆ ಶಾಸಕ ಮತ್ತು ಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮುಖ್ಯವಾಗಿ ಅಂದು ಬಾಲಕಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರ‌್ಯಾರು?. ಬಳಿಕ ವಾರ್ಡ್‌ನಲ್ಲಿ ನೋಡಿಕೊಂಡವರು ಯಾರ‌್ಯಾರು?. ಏನೆಲ್ಲ ಔಷಧ ಕೊಡಲಾಗಿದೆ. ಇಡೀ ಪ್ರಕ್ರಿಯೆ ಏನೆಲ್ಲ ಆಗಿದೆ ಎನ್ನುವ ಬಗ್ಗೆ ಮಾಹಿತಿಗೆ ಸಭೆಯಲ್ಲಿ ಸಮರ್ಪಕ ಉತ್ತರ ಸಿಕ್ಕಿಲ್ಲ. ಜತೆಗೆ ಪಾಲಕರೊಂದಿಗೆ ಬೇಜವಾಬ್ದಾರಿತನದಿಂದ ವರ್ತಿಸಿದವರಿಗೂ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಮಿಮ್ಸ್ ಅವ್ಯವಸ್ಥೆ ಬಗ್ಗೆ ಇತ್ತೀಚೆಗೆ ಉಪಲೋಕಾಯುಕ್ತ ಬಿ.ವೀರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ರವಿಕುಮಾರ್ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.

ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ಆಡಳಿತಾಧಿಕಾರಿ ಜಾನ್ಸನ್ ಇತರರಿದ್ದರು.

ಡಾ.ಪ್ರದೀಪ್ ನೇತೃತ್ವದಲ್ಲಿ ವಿಚಾರಣೆ

ಸಾನ್ವಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಸಲುವಾಗಿ ತಜ್ಞ ವೈದ್ಯರ ತಂಡ ರಚಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶಿಸಿದ್ದಾರೆ.

ಮೈಸೂರು ವೈದ್ಯಕೀಯ ಕಾಲೇಜಿನ ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಪ್ರದೀಪ್ ಅಧ್ಯಕ್ಷತೆಯಲ್ಲಿ ನಾಗಮಂಗಲ ತಾಲೂಕು ಬಿ.ಜಿ ನಗರದ ಏಮ್ಸ್‌ನ ಮೂಳೆ ಮತ್ತು ಕೀಲು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಹೇಶ್ ಮತ್ತು ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಬಾಲಕೃಷ್ಣ, ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ.ಚೇತನಾನಂದ ಸದಸ್ಯರಾಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಸೋಮಶೇಖರ್ ಸದಸ್ಯ ಕಾರ್ಯದರ್ಶಿಯಾಗಿ ವಿಚಾರಣೆ ನಡೆಸಲಿದ್ದಾರೆ. ಸಮಿತಿಯು ಪ್ರಕರಣದ ಗಂಭೀರತೆ ಪರಿಗಣಿಸಿ ತನಿಖೆ ನಡೆಸಿ ವರದಿಯನ್ನು ಹದಿನೈದು ದಿನದೊಳಗಾಗಿ ಸಲ್ಲಿಸುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.

ತಿಂಗಳಿಗೊಮ್ಮೆ ಸಭೆ ಕಡ್ಡಾಯವೆಂದ ಶಾಸಕ

ಮಿಮ್ಸ್ ಅವ್ಯವಸ್ಥೆ ಸರಿಪಡಿಸಲು ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಕಡ್ಡಾಯವಾಗಿ ಪ್ರತಿ ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆ ಮಾಡಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯರ ನಿರ್ಲಕ್ಷೃದಿಂದ ಮಗು ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ಆದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತನಿಖೆಗೆ ಸೂಚನೆ ನೀಡಲಾಗಿದೆ. ಹದಿನೈದು ದಿನದಲ್ಲಿ ವರದಿ ಬರಲಿದ್ದು, ನಂತರ ಸೂಕ್ತ ಕ್ರಮ ವಹಿಸಲಾಗುವುದು. ಘಟನೆ ಸಂಬಂಧ ವೈದ್ಯರಿಂದ ಮಾಹಿತಿ ಕಲೆ ಹಾಕಲಾಗಿದ್ದು, ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿರಬಹುದೆಂಬ ಹೇಳಿದ್ದಾರೆ. ಆದರೆ ಅದು ತೃಪ್ತಿಕರವಾಗಿಲ್ಲದ ಕಾರಣ ಸಮಗ್ರ ತನಿಖೆಗೆ ಸೂಚಿಸಲಾಗಿದೆ. ಮುಖ್ಯವಾಗಿ ವೈದ್ಯರು ಹಾಗೂ ಸಿಬ್ಬಂದಿ ಉಡಾಫೆ ವರ್ತನೆ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂದಿದೆ. ಆ ಬಗ್ಗೆಯೂ ಚರ್ಚಿಸಲಾಗಿದೆ. ಸ್ಥಾನಿಕ ವೈದ್ಯಾಧಿಕಾರಿ ಡಾ.ದರ್ಶನ್ ಅವರ ವರ್ತನೆ ಬಗ್ಗೆಯೂ ಚರ್ಚಿಸಿದ್ದು, ಮತ್ತೆ ಅಂತಹ ವರ್ತನೆ ತೋರದಂತೆ ಎಚ್ಚರಿಕೆ ನೀಡಲಾಗಿದೆ.

ವೈದ್ಯಾಧಿಕಾರಿಗಳು ಮೈಸೂರಿನಲ್ಲಿ ವಾಸ್ತವ್ಯವಿರುವ ಬಗ್ಗೆ ದೂರು ಬಂದಿದೆ. ಆದ್ದರಿಂದ ಜಿಲ್ಲಾ ಕೇಂದ್ರದಲ್ಲೇ ವಾಸ್ತವ್ಯವಿರುವಂತೆ ಸೂಚಿಸಲಾಗಿದೆ. ಪ್ರತಿ ವೈದ್ಯರು ಹಾಗೂ ಸಿಬ್ಬಂದಿ ಬಯೋಮೆಟ್ರಿಕ್ ಹಾಜರಾತಿ ಹಾಕುವುದು ಕಡ್ಡಾಯ. ಇದನ್ನು ಪರಿಶೀಲನೆ ಮಾಡಲು ತಂಡ ರಚಿಸಲು ಸೂಚಿಸಲಾಗಿದೆ. ಜತೆಗೆ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಯೇ ಎನ್ನುವ ಕುರಿತು ಪರಿಶೀಲಿಸುವಂತೆ ತಿಳಿಸಲಾಗಿದೆ ಎಂದರು.

ಮೃತ ಬಾಲಕಿಯ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು. ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ಅಗತ್ಯವಿರುವ ಕ್ರಮ ತೆಗೆದುಕೊಳ್ಳಬೇಕು. ಗುಣಮಟ್ಟದ ಆಹಾರ ಕೊಡುವ ನಿಟ್ಟಿನಲ್ಲಿ ಅಕ್ಕಾ ಕ್ಯಾಂಟೀನ್ ಪ್ರಾರಂಭಿಸಲಾಗುವುದು. ಪಾರ್ಕಿಂಗ್ ಅವ್ಯವಸ್ಥೆ ಸರಿಪಡಿಸಲು ಸೂಚಿಸಲಾಗಿದ್ದು, ಇ ರಶೀದಿ, ಅಗತ್ಯ ಕಡೆ ಸಿ.ಸಿ ಕ್ಯಾಮೆರಾದ ಅಳವಡಿಕೆ ತಿಳಿಸಲಾಗಿದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net