

ವಿಜಯಪುರ: ನಗರದಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಚುರುಕಿನ ಕಾರ್ಯಾಚರಣೆ ನಡೆಸಿ ಒಟ್ಟು 16.87 ಲಕ್ಷ ರೂ.ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಮೋಟರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಋಷಿಕೇಶ ಸೋನಾವಣೆ ತಿಳಿಸಿದರು.
ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಲು ಆಯಾ ಭಾಗದ ಪೊಲೀಸ್ ಅಧಿಕಾರಿಗಳ ನೇತೃತ್ವ ವಿಶೇಷ ತಂಡ ರಚಿಸಲಾಗಿತ್ತು. ಆ ಪ್ರಕಾರ ತಂಡದ ಸದಸ್ಯರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಕಳ್ಳರನ್ನು ಹೆಡೆಮುರಿ ಕಟ್ಟಿ ತಂದಿದ್ದಾರೆ. ಮಾತ್ರವಲ್ಲ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಸಾಮಗ್ರಿ ವಶಕ್ಕೆ ಪಡೆದಿರುವುದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಮದೀನಾ ನಗರದಲ್ಲಿ ಜ.13 ರಂದು ಮನೆಯೊಂದರ ಗೇಟ್ ಹಾಗೂ ಮುಖ್ಯ ಬಾಗಿಲ ಕೀಲಿ ಮುರಿದು ಮನೆಯೊಳಗೆ ಪ್ರವೇಶ ಮಾಡಿ ಎಲ್‌ಜಿ ಕಂಪನಿಯ ಎಲ್‌ಇಡಿ ಟಿವಿ, 40 ಗ್ರಾಂ ತೂಕದ ಚಿನ್ನದ ತಾಳಿ ಸರ, 20 ಗ್ರಾಮ ತೂಕದ ಲಕ್ಷ್ಮಿ ಗಣೇಶ ಹಾಗೂ ಸ್ವಸ್ತಿಕ ಚಿತ್ರವಿರುವ ಬೆಳ್ಳಿಯ ಕ್ವಾಯಿನ್‌ಗಳು-3 ಹಾಗೂ 15 ಸಾವಿರ ರೂಪಾಯಿ ನಗದು ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ನಡೆಸಲು ಎಎಸ್‌ಪಿ ಶಂಕರ ಮಾರಿಹಾಳ, ಎಎಸ್‌ಪಿ ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಬಸವರಾಜ ಯಲಿಗಾರ ಮಾರ್ಗದರ್ಶನದಲ್ಲಿ ಪಿಐ ಪ್ರದೀಪ ತಳಕೇರಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದೆ.
ಸ್ಥಳೀಯ ಬಬಲೇಶ್ವರ ನಾಕಾದ ನಿವಾಸಿ ಜಮೀರ ರಫೀಕ್ ಖಾನ (23), ಶಾಸ್ತ್ರೀ ನಗರದ ನಿವಾಸಿ ಅನ್ವರ ಅಬ್ದುಲ್ ರಜಾಕ್ ಶೇಖ (31), ಅಥಣಿಯ ಆಸೀಫ್ ಅಬ್ದುಲ್‌ಹಮೀದ್ ಹವಾಲ್ದಾರ (34) ಹಾಗೂ ಶಾಸ್ತ್ರೀ ನಗರದ ಸಲ್ಮಾನ ಏಜಾಜ ಖಾನ (29) ಬಂಧಿತ ಆರೋಪಿಗಳು. ಇವರು ಒಟ್ಟು ನಾಲ್ಕು ಮನೆಗಳ್ಳಲ್ಲಿ ಕಳ್ಳತನ ಮಾಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಇವರಿಂದ ಅಂದಾಜು 210 ಗ್ರಾಂ ಚಿನ್ನಾಭರಣಗಳು, 20 ಗ್ರಾಂ ತೂಕದ ಬೆಳ್ಳಿಯ ಕ್ವಾಯಿನ್‌ಗಳು, ಒಂದು ಎಲ್‌ಇಡಿ ಟಿವಿ ಹಾಗೂ ಕೃತ್ಯಕ್ಕೆ ಬಳಸಿದ ಎರಡು ಮೋಟರ್ ಸೈಕಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ಮೌಲ್ಯ 12.17 ಲಕ್ಷ ರೂ.ಎಂದು ಅಂದಾಜಿಸಲಾಗಿದೆ ಎಂದು ಎಸ್‌ಪಿ ಋಷಿಕೇಶ ತಿಳಿಸಿದರು.
ಇದೇ ರೀತಿ ಝಂಡಾ ಕಟ್ಟಿ ಬಳಿಯ ನಿವಾಸಿ ಸಮೀರ್ ನಬಿಲಾಲ ಇನಾಂದಾರ (20) ಈತನಿಂದ 50 ಗ್ರಾಂ ತೂಕದ ಅಂದಾಜು 2.70 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಗುರು ಜ್ಯುವೆಲರಿ ಶಾಪ್‌ನಲ್ಲಿ ಚಿನ್ನಾಭರಣ ಕಳವು ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಲಲಿತಾ ಊರ್ಫ್ ಶಾಂತಾಬಾಯಿ ದಿಲೀಪ್ ಗಾಯಕವಾಡ (65) ಹಾಗೂ ಮೋಟರ್ ಸೈಕಲ್ ಕಳ್ಳತನ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಸಾರಗಲ್ಲಿಯ ನಿವಾಸಿ ಸಾಬೀರ ರೌಫ್ ಬಗಲಿ (30), ಇರಾನಿ ಕಾಲನಿಯ ಗೌಸಮೋದ್ದೀನ ಮುಸ್ತಾನಸಾಬ ಮಕಾನದಾರ (23) ಇವರನ್ನು ಬಂಧಿಸಿ ಇವರಿಂದ 1.20 ಲಕ್ಷ ರೂ.ಮೌಲ್ಯದ 3 ಮೋಟರ್ ಸೈಕಲ್ ವಶಕ್ಕೆ ಪಡೆಯಲಾಗಿದೆ. ಒಟ್ಟು 16.80 ಲಕ್ಷ ರೂ.ಮೌಲ್ಯದ ಸಾಮಗ್ರಿ ವಶಕ್ಕೆ ಪಡೆದಿರುವುದಾಗಿ ಎಸ್‌ಪಿ ಋಷಿಕೇಶ ತಿಳಿಸಿದರು.
ಎಎಸ್‌ಪಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಬಸವರಾಜ ಯಲಿಗಾರ ಮತ್ತಿತರರಿದ್ದರು. ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಲಾಯಿತು.