

ಮೈಸೂರು: ಜಿಲ್ಲೆಗೆ ನಂಜಾಗಿ ಕಾಡಿದ್ದ ನಂಜನಗೂಡಿನ ಜುಬಿಲೆಂಟ್ ಕಾರ್ಖಾನೆ ಕಾರ್ವಿುಕರಿಗೆ ಸೋಂಕು ಹರಡಿದ ಪ್ರಕರಣ ಕೊನೆಗೂ ನಿಗೂಢವಾಗಿಯೇ ಉಳಿದಿದ್ದು, ಪ್ರಕರಣದ ಹಿನ್ನೆಲೆ ತನಿಖೆಗೆ ನೇಮಿಸಲಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಕೆ.ಹರ್ಷಗುಪ್ತಾ, ಸರ್ಕಾರಕ್ಕೆ ಅಪೂರ್ಣ ವರದಿ ಸಲ್ಲಿಸುವುದರೊಂದಿಗೆ ತನಿಖೆಗೆ ತೆರೆ ಎಳೆದಿದ್ದಾರೆ.
ಕಾರ್ಖಾನೆ ಕಾರ್ವಿುಕನಿಗೆ (ಪಿ-52) ವೈರಸ್ ಹೇಗೆ ಬಂತು ಎನ್ನುವುದನ್ನು ಪತ್ತೆ ಮಾಡಿ ವಾರದಲ್ಲಿ ವರದಿ ಸಲ್ಲಿಸುವಂತೆ, ಸೋಂಕು ನಿಯಂತ್ರಣಕ್ಕೆ ನೋಡಲ್ ಅಧಿಕಾರಿಯಾಗಿ ಹರ್ಷಗುಪ್ತಾ ನೇಮಕಗೊಂಡಿದ್ದರು. ಸರ್ಕಾರದ ಆದೇಶದ ಮೇರೆಗೆ ತನಿಖೆ ಕೈಗೊಂಡರೂ ಇತರ ಇಲಾಖೆಗಳಿಂದ ಸರಿಯಾದ ಸಹಕಾರ ದೊರೆತಿಲ್ಲ. ತಾವು ಬಯಸಿದ ಮಾಹಿತಿ, ತಾಂತ್ರಿಕ ಮಾರ್ಗದರ್ಶನ ದೊರೆತಿಲ್ಲ ಎನ್ನುವ ಮೂಲಕ ತಮಗೆ ಲಭ್ಯವಾದ ಮಾಹಿತಿಯನ್ನೇ ಹರ್ಷಗುಪ್ತಾ ಸರ್ಕಾರಕ್ಕೆ ವರದಿ ರೂಪದಲ್ಲಿ ಸಲ್ಲಿಸಿದ್ದಾರೆ.
ಪ್ರಕರಣದ ತನಿಖೆಗೆ ವೈಜ್ಞಾನಿಕ ವಿಧಾನಗಳಿವೆಯೇ ಎಂದು ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ಗೆ ಪತ್ರ ಬರೆದಿದ್ದು, ಕೋವಿಡ್ ಸಾಂಕ್ರಾಮಿಕ ರೋಗವಲ್ಲ. ಅದು ಸರ್ವವ್ಯಾಪಿ ಪಿಡುಗು. ಇದಕ್ಕೆ ನಮ್ಮಲ್ಲಿ ಕಾಯ್ದೆಯಿಲ್ಲ. ಶಂಕಿತರು, ಸೋಂಕಿತರನ್ನು ಸಂರ್ಪಸಿ ಪೊಲೀಸ್ ಮಾದರಿ ತನಿಖೆ ಕಷ್ಟ. ಈಗ ಮೂಲ ಹುಡುಕುವುದಕ್ಕಿಂತಲೂ ಹರಡುವುದನ್ನು ತಡೆಯುವುದು ಮುಖ್ಯ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಹರ್ಷಗುಪ್ತಾ ಕೇಳಿದ್ದ ಮಾಹಿತಿ ನೀಡಿದ್ದೇವೆ. ಅವರು ತನಿಖೆ ನಡೆಸಿ ನೇರ ಸರ್ಕಾರಕ್ಕೆ ವರದಿ ಸಲ್ಲಿಸುವುದರಿಂದ ಆ ಕುರಿತು ಹೆಚ್ಚಿನ ಮಾಹಿತಿ ತಿಳಿದಿಲ್ಲ. | ಅಭಿರಾಮ್ ಜಿ.ಶಂಕರ್ ಮೈಸೂರು ಡಿಸಿ