

ಮುಂಡಗೋಡ: ತಾಲೂಕಿನ ಕಾತೂರ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾಗಳ ಕುರಿತು ತನಿಖೆ ನಡೆಸುವಂತೆ ವ್ಯಕ್ತಿಯೊಬ್ಬರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ ಪರಿಣಾಮ ಅಧಿಕಾರಿಗಳ ತಂಡ ಬುಧವಾರ ಕಾತೂರ ಪಂಚಾಯಿತಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ.
ತಾಲೂಕಿನ ಕಾತೂರ ಗ್ರಾಮದ ಮರ್ದಾನಸಾಬ್ ಬಳಿಗಾರ ಎಂಬುವವರು ಜು. 4ರಂದು ಜಿಲ್ಲಾಧಿಕಾರಿಗೆ ದೂರನ್ನು ಸಲ್ಲಿಸಿ ಕಾತೂರ ಗ್ರಾಮ ಪಂಚಾಯಿತಿಯಲ್ಲಿ 2021ರಿಂದ 2023ವರೆಗೆ ರೇಣುಕಾ ಎಂಬವರ ಅಧ್ಯಕ್ಷರ ಅವಧಿಯಲ್ಲಿ ಹಲವಾರು ಭ್ರಷ್ಟಾಚಾರಗಳು ನಡೆದಿದ್ದು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದರು.
ಕಾತೂರ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿ ಕಾರಿಗೆ ಸೂಚಿಸಿದ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಕರಿಂ ಅಸದಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಿ.ಎಂ. ಜಕ್ಕಪ್ಪಗೋಳ, ತಾಪಂ ಅಧಿಕಾರಿ ಪ್ರವೀಣ ಕಟ್ಟಿ ಹಾಗೂ ತಾಪಂ ಯೋಜನಾಧಿಕಾರಿ ಟಿ.ವೈ.ದಾಸನಕೊಪ್ಪ ಅವರ ತಂಡ ಬುಧವಾರ ಕಾತೂರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ.
2021-22ನೇ ಸಾಲಿನಲ್ಲಿ ಸಂತೆ ಹಾಗೂ ಕೊಂಡವಾಡೆ ಹರಾಜು ಹಿಡಿದಿದ್ದ ಗುತ್ತಿಗೆದಾರ ಹಣ ನೀಡಿದ್ದರೂ ಪಂಚಾಯಿತಿಗೆ ಜಮಾ ಮಾಡಿಕೋಳ್ಳದೆ ದುರ್ಬಳಕೆ ಮಾಡಿಕೊಂಡಿರುವುದು, ಪಂಪ್ಸೆಟ್ ಹಣ 12 ಸಾವಿರ ರೂ. ದುರ್ಬಳಕೆ ಮತ್ತು ಪಂಚಾಯಿತಿಯಿಂದ ಸಾರ್ವಜನಿಕರಿಗೆ ವಿವಿಧ ಪ್ರಮಾಣ ಪತ್ರಗಳ ನೀಡಲು ಹಣ ಪಡೆಯುವುದು ಮತ್ತು ವಸತಿ ಯೋಜನೆಯಡಿ ಮನೆ ನೀಡುತ್ತೆವೆ ಎಂದು ಮೂವತ್ತು ಸಾವಿರರೂ. ಹಣ ಕೇಳಿರುವ ಕುರಿತು ಸಾಕ್ಷ ಸಮೇತ ಮಾಹಿತಿಯನ್ನು ಕೆಲ ಸಾರ್ವಜನಿಕರು ಅಧಿಕಾರಿಗಳ ಮುಂದಿಟ್ಟರು. ಸಮಗ್ರ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳ ತಂಡ ಮರಳಿ ಕಾರವಾರಕ್ಕೆ ತೆರಳಿತು.
ಕಾತೂರ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ದೂರ ಬಂದ ಹಿನ್ನಲೆಯಲ್ಲಿ ಪಂಚಾಯಿತಿಗೆ ಭೇಟಿ ನೀಡಿ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿದ್ದು ಹಿರಿಯ ಅಧಿಕಾರಿಗಳಿಗೆ ನೀಡಲಾಗುವುದು. | ಕರಿಂ ಅಸದಿ ಜಿಪಂ ಯೋಜನಾಧಿಕಾರಿ