

ಶಿರಹಟ್ಟಿ: ಕೃಷಿ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೀಡುವ ಸಹಾಯಧನ, ಕೃಷಿ ಯಂತ್ರೋಪಕರಣಗಳ ದುರ್ಬಳಕೆ ಆದ ಕುರಿತು ತನಿಖೆಗೆ ನೀಡಿದ ಆದೇಶ ನನೆಗುದಿಗೆ ಬಿದ್ದಿದೆ.
ನ. 24ರಂದು ತಾಪಂನಲ್ಲಿ ತಾಲೂಕು ಮಟ್ಟದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆ ನಡೆದಿತ್ತು. ಸರ್ಕಾರದಿಂದ ಎಸ್ಸಿಎಸ್ಟಿ ಫಲಾನುಭವಿಗಳಿಗೆ ನೀಡಲಾಗುವ ಅನುದಾನ ಸೇರಿದಂತೆ ಕೃಷಿ ಉಪಯೋಗಿ ಸಲಕರಣೆಗಳು ಅರ್ಹ ಫಲಾನುಭವಿಗಳಿಗೆ ತಲುಪದೇ ಮಧ್ಯವರ್ತಿಗಳ ಪಾಲಾಗುತ್ತಿರುವ ಕುರಿತು ದೂರು ಬಂದಿದೆ ಎಂದು ಇಒ ಡಾ.ಎನ್.ಎಂ. ಓಲೇಕಾರ ಸಭೆಯ ಗಮನಕ್ಕೆ ತಂದಿದ್ದರು. ಆಗ ಬಿಸಿ ಬಿಸಿ ಚರ್ಚೆ ನಡೆದು, ತನಿಖೆ ನಡೆಸಲು ಅಧಿಕಾರಿ ನೇಮಕಕ್ಕೆ ತಹಸೀಲ್ದಾರ್ ಜಿಪಂ ಸದಸ್ಯರು, ತಾಪಂ ಅಧ್ಯಕ್ಷ, ಉಪಾಧ್ಯಕ್ಷರ ಸಮ್ಮುಖದಲ್ಲಿ ಠರಾವ್ ಪಾಸ್ ಮಾಡಲಾಗಿತ್ತು.
ಆರ್ಥಿಕವಾಗಿ ಹಿಂದುಳಿದ ಬಡ ವರ್ಗದ ರೈತರಿಗೆ ಸರ್ಕಾರದಿಂದ ನೀಡಲಾಗುವ ಕೃಷಿ ಸಲಕರಣೆಗಳು ಅನ್ಯರ ಪಾಲಾಗುವ ಜತೆಗೆ ಕೃಷಿ ಹೊಂಡ, ಬಾಂದಾರ, ಬದು ನಿರ್ವಣದಂಥ ಕಾಮಗಾರಿಗಳ ಸುಳ್ಳು ದಾಖಲೆ ಸೃಷ್ಟಿಸಿ ಅವ್ಯವಹಾರ ಮಾಡಲಾಗಿದೆ. ಹೀಗಾಗಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ನ್ಯಾಯ ದೊರಕಿಸಿ ಕೊಡಿ ಎಂದು ರೈತರಿಂದ ಮನವಿ ಬಂದಿದೆ. ಕಾರಣ ತನಿಖೆ ಅಗತ್ಯವಾಗಿದೆ ಎಂದು ಓಲೇಕಾರ ಸಮರ್ಥಿಸಿಕೊಂಡಿದ್ದರು.
ಅದರಂತೆ ತಾಪಂ ಇಒ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಎಸ್.ಬಿ. ಹರ್ತಿ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿದ್ದರು. ತನಿಖೆ ಕೈಗೊಂಡು ಶೀಘ್ರ ವರದಿ ಸಲ್ಲಿಸಲು ಇಒ ಆದೇಶಿಸಿದ್ದರು. ಅಲ್ಲದೆ, ತನಿಖೆ ವೇಳೆ ಅಗತ್ಯ ದಾಖಲೆ ನೀಡಿ ಸಹಕರಿಸಲು ಕೃಷಿ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದ್ದರು. ಆದರೆ, ಎರಡು ತಿಂಗಳು ಆದರೂ ಪ್ರಗತಿಯಾಗಿಲ್ಲ. ತನಿಖೆ ಆದೇಶ ಕಾಗದಕ್ಕೆ ಮಾತ್ರ ಸೀಮಿತವಾಗಿದೆ.
ಶಿರಹಟ್ಟಿ ತಾಪಂ ಆಡಳಿತ ಮಂಡಳಿ ಆಕ್ಷೇಪಣೆ ಮೇರೆಗೆ 2019, 2020-21ನೇ ಸಾಲಿನ ಕೇಂದ್ರ, ರಾಜ್ಯ, ಜಿಲ್ಲಾ, ತಾಲೂಕು ವಲಯದ ಎಸ್ಸಿಪಿ, ಟಿಎಸ್ಪಿ ಯೋಜನೆ ಅನುಷ್ಠಾನದ ಸಮಗ್ರ ತನಿಖೆಗೆ ಅಂದಿನ ಸಭೆಯಲ್ಲಿ ಠರಾವ್ ಮಾಡಲಾಗಿತ್ತು. ಅದರಂತೆ ತನಿಖೆಗೆ ಅಧಿಕಾರಿ ನೇಮಕ ಮಾಡಲಾಗಿದೆ. ಗ್ರಾಪಂ ಚುನಾವಣೆ ಎದುರಾಗಿದ್ದರಿಂದ ತನಿಖೆಗೆ ಅಡೆತಡೆಯಾಗಿತ್ತು. ಸದ್ಯ ಚುನಾವಣೆ ಮುಗಿದಿದ್ದು, ತುರ್ತು ತನಿಖೆ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗೆ ಸೂಚನೆ ನೀಡುತ್ತೇನೆ.| ಡಾ.ಎನ್.ಎಂ. ಓಲೇಕಾರ, ಶಿರಹಟ್ಟಿ ತಾಪಂ ಇಒತನಿಖೆಗೆ ಅಗತ್ಯ ದಾಖಲೆ ನೀಡಲು ಕೃಷಿ ಅಧಿಕಾರಿಗೆ ಪತ್ರ ಬರೆದಿದ್ದೆ. ಅವರಿಂದ ಪ್ರತಿಕ್ರಿಯೆ ವ್ಯಕ್ತವಾಗದ ಬಗ್ಗೆ ತಾಪಂ ಇಒಗೆ ತಿಳಿಸಲಾಗಿದೆ. ಏತನ್ಮಧ್ಯೆ ಗ್ರಾಪಂ ಚುನಾವಣೆ ಬಂದಿದ್ದರಿಂದ ಆ ಕರ್ತವ್ಯದಲ್ಲಿ ನಿರತನಾಗಿದ್ದೆ. ಈಗ ಮತ್ತೆ ಕೃಷಿ ಅಧಿಕಾರಿಯಿಂದ ಮಾಹಿತಿ ಪಡೆಯುತ್ತೇನೆ.|ಎಸ್.ಬಿ. ಹರ್ತಿ, ಶಿರಹಟ್ಟಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ