

ಹರಿಹರ: ಉತ್ತರ ಪ್ರದೇಶದಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಅವರಿಗೆ ದಸಂಸ ಕಾರ್ಯಕರ್ತರು (ಕೃಷ್ಣಪ್ಪ ಸ್ಥಾಪಿತ) ಮನವಿ ಸಲ್ಲಿಸಿದರು.
ನಗರದ ಫಕ್ಕೀರಸ್ವಾಮಿ ಮಠದಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ತಾಲೂಕು ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು.
ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ದುರುಳರು ದಲಿತ ಯುವತಿ ಮೇಲೆ ಪೈಶಾಚಿಕ ಕೃತ್ಯ ನಡೆಸಿದ್ದು, ನಾಗರಿಕ ಸಮಾಜ ಆತಂಕಗೊಳ್ಳುವಂತೆ ಮಾಡಿದೆ. ಉತ್ತರ ಪ್ರದೇಶ ಸರ್ಕಾರ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಮುಖಂಡ ಭಾನುವಳ್ಳಿ ಹರೀಶ್ ಮಾತನಾಡಿ, ಎಸ್‌ಐಟಿ, ಸಿಬಿಐ ಸಂಸ್ಥೆಗಳು ಯಾವುದೇ ಒತ್ತಡಕ್ಕೆ ಮಣಿಯದೇ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಆದಿ ದ್ರಾವಿಡ ಛಲವಾದಿ ಸಮಾಜದ ಅಧ್ಯಕ್ಷ ಡಾ.ಜಗನ್ನಾಥ್, ಮುಖಂಡರಾದ ಬನ್ನಿಕೋಡು ವಾಗೀಶ್, ಎಚ್.ಎಂ.ಗುಡದಯ್ಯ ರಾಜನಹಳ್ಳಿ, ಸುರೇಶ್, ಪ್ರದೀಪ ಜಿಗಳಿ ಮತ್ತಿತರರಿದ್ದರು.