ಸಿಎಂ ವಿರುದ್ಧ ತನಿಖೆಗೆ ಅನುಮತಿ: ಸಿದ್ದರಾಮಯ್ಯ ತವರಿನಲ್ಲಿ ಆಕ್ರೋಶದ ಕಿಡಿ

mysore
Published on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಖಂಡಿಸಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ವತಿಯಿಂದ ನಗರದ ಕೋರ್ಟ್ ಆವರಣದ ಎದುರು ಗಾಂಧಿ ಪುತ್ಥಳಿ ಬಳಿ ನಡೆದ ಪ್ರತಿಭಟನೆಯಲ್ಲಿ ರಾಜ್ಯಪಾಲರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಟಯರ್‌ಗೂ ಬೆಂಕಿ ಹಚ್ಚಿ ರಾಜ್ಯಪಾಲರ ವಿರುದ್ಧ ಪ್ರತಿಭಟನಾಕಾರರು ಕಿಡಿಕಾರಿದರು.


ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದರು. ಇದರಿಂದ ಕೆರಳಿದ ಕೆಲವರು ತೀವ್ರ ಬೇಸರಗೊಂದು ಬಟ್ಟೆಯನ್ನು ಬಿಚ್ಚಿ ಅರೆಬೆತ್ತಲೆಯಾಗುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಟಿಯರ್ ಗ್ಯಾಸ್ ಸಿಡಿಸಿ ಗುಂಪು ಚದುರಿಸಲು ಪ್ರಯತ್ನಿಸಿದರು. ಆದರೆ ಪ್ರತಿಭಟನಾಕಾರರು ಅದಕ್ಕೆ ಜಗ್ಗದೆ ಪ್ರತಿಭಟನೆ ಮುಂದುವರಿಸಿದರು.


ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟ್ ಹಾಗೂ ಬಿಜೆಪಿಯ ಕೈಗೊಂಬೆ ಎಂದೂ ಘೋಷಣೆ ಕೂಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಪ್ರಾಸಿಕ್ಯೂಷನ್ ಅನುಮತಿಯನ್ನು ರಾಜ್ಯಪಾಲರು ಹಿಂಪಡೆಯಬೇಕೆಂದು ಆಗ್ರಹಿಸಿದರು.
ರಾಜ್ಯಪಾಲರ ಈ ನಡೆ ಸಂವಿಧಾನಬಾಹಿರ. ಇದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಪ್ರಧಾನಿ ನರೇಂದ್ರ ಮೋದಿ ಸೇವಕರಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಪವಿತ್ರವಾದ ಸಾಂವಿಧಾನಿಕ ಹುದ್ದೆಗೆ ರಾಜ್ಯಪಾಲರು ಅಪಚಾರ ಮಾಡಿದ್ದಾರೆ ಎಂದು ಆರೋಪಿಸಿದರು.


ಬಿಜೆಪಿ ಕಚೇರಿ ಮತ್ತಿಗೆ ಯತ್ನ:


ನ್ಯಾಯಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು ಇದ್ದಕ್ಕಿದ್ದಂತೆ ಬಿಜೆಪಿ ಕಚೇರಿ ಮುತ್ತಿಗೆ ಹಾಕಲು ಮುಂದಾದರು. ಬಿಜೆಪಿ ಕಚೇರಿಯತ್ತ ಹೆಜ್ಜೆ ಹಾಕಿದರು. ಪೊಲೀಸರು ಅವರನ್ನು ಮಾರ್ಗ ಮಧ್ಯೆ ತಡೆದು ಬಿಜೆಪಿ ಕಚೇರಿ ಮುತ್ತಿಗೆ ಹಾಕದಂತೆ ಮನವೊಲಿಸಿದರು.


ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್, ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ, ಮುಖಂಡ ಎಚ್.ಎಸ್. ಪ್ರಕಾಶ್, ಯೋಗೇಶ್ ಉಪ್ಪಾರ್, ರವಿನಂದನ್, ಲೋಕೇಶ್‌ಕುಮಾರ್, ಬಸಪ್ಪ, ರಾಜೇಶ್, ರಹೀಮ್‌ಖಾನ್, ನಾಸಿರ್, ಮಹೇಂದ್ರ, ಕೇಶವ, ದಿನೇಶ್, ಮಂಜುಳಾ, ಹರೀಶ್ ಮೊಗಣ್ಣ, ಲಕ್ಷ್ಮೀ, ಶೋಭಾ ಇನ್ನಿತರರಿದ್ದರು.

ರಾಮಸ್ವಾಮಿ ವೃತ್ತದಲ್ಲಿ ಕೈ ಕಾರ್ಯಕರ್ತ ಪ್ರತಿಭಟನೆ


ಕಾಂಗ್ರೆಸ್ ಕಾರ್ಯಕರ್ತರು ಸಹ ಪ್ರತಿಭಟನೆ ನಡೆಸಿದರು. ರಾಮಸ್ವಾಮಿ ವೃತ್ತದಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ರಸ್ತೆ ಸಂಚಾರ ತಡೆದು ಕೇಂದ್ರ ಬಿಜೆಪಿ ಮತ್ತು ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದರು. ಜತೆಗೆ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.


ಸಿದ್ದರಾಮಯ್ಯ ಅವರ ಕೆಲಸವನ್ನು ಸಹಿಸದ ಬಿಜೆಪಿ-ಜೆಡಿಎಸ್ ನಾಯಕರು ಅವರನ್ನು ನೇರವಾಗಿ ಎದುರಿಸಲಾಗದೆ ಕುತಂತ್ರದ ದಾರಿ ಹಿಡಿದಿದ್ದಾರೆ. ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಿದ್ದು, ಇದು ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ಕಗ್ಗೊಲೆಗೆ ಮುಂದಾಗಿದೆ. ರಾಜಕೀಯ ಪ್ರೇರಿತವಾದ ರಾಜ್ಯಪಾಲರ ಈ ನಡೆ ಖಂಡನೀಯ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.


ಈ ಷಡ್ಯಂತ್ರದ ವಿರುದ್ಧ ಕಾನೂನು ಹೋರಾಟ ನಡೆಯಲಿದ್ದು, ರಾಜಭವನವನ್ನು ರಾಜಕೀಯ ದ್ವೇಷದ ಕಾರಣಕ್ಕೆ ಬಳಸಿಕೊಳ್ಳುತ್ತಿರುವ ಬಿಜೆಪಿಗರು ಇದೀಗ ರಾಜ್ಯದ ಜನತೆಯ ಹಾಗೂ ಅಹಿಂದ ವರ್ಗದ ಆಕ್ರೋಶವನ್ನು ಎದುರಿಸಲಿದ್ದಾರೆ ಎಂದು ಎಚ್ಚರಿಸಿದರು

ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ಮುಖಂಡರಾದ ಜಿ.ಸೋಮಶೇಖರ್, ಶ್ರೀಧರ್, ರವಿಶಂಕರ್, ಜೆ ಗೋಪಿ, ಎಂ ಸುನೀಲ್, ಆರ್.ಎಚ್.ಕುಮಾರ್, ಮಹಮದ್ ಫಾರೂಕ್, ಕಲೀಮ್ ಷರೀಫ್, ಶಾಧಿಕ್ ಉಲ್ಲ ರೆಹಮಾನ್ ಇತರರು ಇದ್ದರು.

ಬಿಜೆಪಿ ಕಚೇರಿಗೆ ಬಿಗಿ ಭದ್ರತೆ


ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ನಗರದ ಬಿಜೆಪಿ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.


ಚಾಮರಾಜಪುರಂನ ದೇವಪಾರ್ಥಿವ ರಸ್ತೆಯಲ್ಲಿರುವ ಕಚೇರಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಭದ್ರತೆ ಕಲ್ಪಿಸಲಾಗಿದೆ. ಈ ಕಚೇರಿ ಸಂಪರ್ಕಿಸುವ ರಸ್ತೆಯ ಎರಡು ಕಡೆಗಳಲ್ಲೂ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net