

ಚಿತ್ರದುರ್ಗ: ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಆಗ್ರಹಿಸಿ ಜ.23ರಂದು ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಕಾಂಗ್ರೆಸ್ ಮುಖಂಡ ಹನುಮಲಿ ಷಣ್ಮುಖಪ್ಪ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 11ಕ್ಕೆ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಮೆರವಣಿಗೆ ನಡೆಸಿ, ಡಿಸಿ ಕಚೇರಿ ಬಳಿ 2 ಗಂಟೆಗಳ ಕಾಲ ಮುಷ್ಕರ ನಡೆಸಿ, ನ್ಯಾಯಾಂಗ ತನಿಖೆಗೆ ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಗುತ್ತಿಗೆದಾರರೊಬ್ಬರು ಶಾಸಕರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರಪರಾಧಿ ಎಂಬುದನ್ನು ಸಾಬೀತುಪಡಿಸಬೇಕು. ಕ್ಷೇತ್ರದ ಮತದಾರರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲಿದೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ತಾವೂ ಲಂಚ ಪಡೆಯುವುದಿಲ್ಲ; ಬೇರೆಯವರೂ ಪಡೆಯಲು ಬಿಡುವುದಿಲ್ಲ ಎಂದು ಘೋಷಿಸಿದ್ದಾರೆೆ. ಇದು ನಿಜವೇ ಆಗಿದ್ದರೆ, ತಿಪ್ಪಾರೆಡ್ಡಿ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಾಧ್ಯಕ್ಷ ಹಾಲಸ್ವಾಮಿ, ವಿಧಾನಪರಿಷತ್ ಮಾಜಿ ಸದಸ್ಯ ರಘು ಆಚಾರ್, ಎನ್‌ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿ ಮಮತಾ ನೇರ್ಲಿಗೆ, ಮುಖಂಡರಾದ ಡಿ.ಟಿ.ವೆಂಕಟೇಶ್, ಆರ್.ಶೇಷಣ್ಣಮಾರ್, ಮಂಜಣ್ಣ, ಕೆ.ಪಿ.ಸಂಪತ್‌ಕುಮಾರ್, ಪ್ರಕಾಶ್ ರಾಮನಾಯ್ಕ, ಅಂಜನಪ್ಪ, ಅಶೋಕ್ ನಾಯ್ಡು, ತಿಪ್ಪೇಸ್ವಾಮಿ, ಇಮಾಮ್, ಶಬ್ಬೀರ್ ಬಾಷಾ, ಮುದಸೀರ್ ನವಾಜ್ ಇತರರಿದ್ದರು.
*ಆರೋಪಿತರಿಗೆ ಟಿಕೆಟ್ ಇಲ್ಲ
ನಮ್ಮದು ರಾಷ್ಟ್ರೀಯ ಪಕ್ಷ. ನಮಗೂ ಜವಾಬ್ದಾರಿಗಳಿವೆ. ಗುತ್ತಿಗೆದಾರರ ಆರೋಪವನ್ನು ಧೀರ್ಘ ಚರ್ಚೆ ನಂತರವೇ ಪ್ರತಿಭಟಿಸಲು ನಿರ್ಧರಿಸಿದ್ದೇವೆ. ಭ್ರಷ್ಟಾಚಾರದ ವಿರೋಧಿಗಳಾದ ನಾವು ಬರುವ ಚುನಾವಣೆಯಲ್ಲಿ ಆರೋಪಿತರಿಗೆ ಟಿಕೆಟ್ ನೀಡುವುದಿಲ್ಲ ಎಂದು ತಾಜ್‌ಪೀರ್ ಹೇಳಿದರು.