

ಚೇಳೂರು: ಗ್ರಾಪಂ ಕಚೇರಿಯಲ್ಲಿ ಪತಿಯರ ದಬ್ಬಾಳಿಕೆ ಹಾಗೂ ಸರ್ಕಾರಿ ಯೋಜನೆಗಳಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಒತ್ತಾಯಿಸಿ ತಾಲೂಕಿನ ರಾಶ್ಚೇರುವು ಗ್ರಾಪಂ ಕಚೇರಿ ಎದುರು ಪಂಚಾಯಿತಿ ಸದಸ್ಯರು ಬುಧವಾರ ಧರಣಿ ನಡೆಸಿದರು.
ಜೆಡಿಎಸ್ ಮುಖಂಡ ಎಸ್.ಆರ್.ಲಕ್ಷ್ಮೀನಾರಾಯಣ ಮಾತನಾಡಿ, ರಾಶ್ಚೇರುವು ಗ್ರಾಪಂವಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರನ್ನು ಮನೆ ಕೆಲಸಕ್ಕೆ ಬಳಸಿಕೊಂಡು ನಾಗರೀಕರಿಗೆ ತೊಂದರೆ ನೀಡುತ್ತಿರುವ ಗ್ರಾಪಂ ಅಧ್ಯಕ್ಷೆ ಲೀಲಾವತಿ ಅವರ ಪತಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಗ್ರಾಪಂ ಅನುದಾನದಲ್ಲಿ ಖರೀದಿಸಿರುವ ಟ್ರ್ಯಾಕ್ಟರ್ ಮತ್ತು ಸಾರ್ವಜನಿಕ ಕೊಳವೆ ಬಾವಿಗಳಿಗೆ ಅಳವಡಿಸಿರುವ ಪೈಪ್ ಮತ್ತು ಇತರ ಸಲಕರಣೆಗಳನ್ನು ಅಧ್ಯಕ್ಷೆಯ ಪತಿ ತಮ್ಮ ಸ್ವಂತಕ್ಕೆ ಬಳಕೆ ಮಾಡಿಕೊಂಡು ಅಧಿಕಾರ ದುರ್ಬಳಕೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಗ್ರಾಪಂ ಯೋಜನೆಗಳಲ್ಲಿ ನಡೆಯುತ್ತಿರುವ ಅವ್ಯವಹಾರ ಪ್ರಶ್ನಿಸಿ ಸರ್ಕಾರಿ ಯೋಜನೆಗಳ ಸಲಕರಣೆೆಗಳ ದಾಸ್ತಾನು ಕೊಠಡಿಗೆ ಬೀಗ ಜಡಿದು ಆರು ತಿಂಗಳು ಕಳೆದರೂ ಅಧಿಕಾರಿಗಳು ತನಿಖೆಗೆ ಮುಂದಾಗಿಲ್ಲ. ಅಧ್ಯಕ್ಷೆಯ ಕ್ಷೇತ್ರ ಹೊರತುಪಡಿಸಿ ಉಳಿದ ಸದಸ್ಯರ ಕ್ಷೇತ್ರಗಳಲ್ಲಿ ನರೇಗಾ ಯೋಜನೆ ಅನುಷ್ಠಾನಗೊಳಿಸದಂತೆ ಅಧಿಕಾರಿಗಳನ್ನು ಬೆದರಿಸಿ ಯೋಜನೆ ಹಳ್ಳ ಹಿಡಿಯುವಂತೆ ಮಾಡಿದ್ದಾರೆ. ಗ್ರಾಪಂ ವ್ಯಾಪ್ತಿಯ ಆರು ಕುಡಿಯುವ ನೀರಿನ ಶುದ್ಧೀಕರಣ ಘಟಕಗಳಲ್ಲಿ ಅಳವಡಿಸಿರುವ ಕಾಯಿನ್ ಬಾಕ್ಸ್‌ಗಳ ಹಣವನ್ನು ಅಧ್ಯಕ್ಷರು ತನ್ನ ಸ್ವಂತಕ್ಕೆ ಬಳಸಿಕೊಂಡು ಅವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ. ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಕಾನೂನು ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯರಾದ ಕೆ.ಎಸ್.ನಾಗಿರೆಡ್ಡಿ, ಸರಸ್ವತಮ್ಮ ನಾಗೇಶ್, ಚಿನ್ನಮದ್ದಿರೆಡ್ಡಿ, ಸಿ.ವೀರಾಂಜನೇಯಲು, ಸಲ್ಮಾಅಭೀದ್, ಮುಖಂಡರಾದ ಲಕ್ಷ್ಮೀನಾರಾಯಣ್, ಸರ್ದಾರ್, ರಾಮಚಂದ್ರರೆಡ್ಡಿ, ಅಂಜಿ, ಅಭೀದ್, ಈಶ್ವರಪ್ಪ, ರಾಜು, ನಾಗರಾಜು, ಶಿವಪ್ಪ, ವೆಂಕಟೇಶ್ ಇತರರಿದ್ದರು.