

ಹುಬ್ಬಳ್ಳಿ : ಧಾರವಾಡದಲ್ಲಿ ಸಂಶಯಾಸ್ಪದ ವ್ಯಕ್ತಿಗಳ ಓಡಾಟ ಹೆಚ್ಚಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಶ್ರೀರಾಮ ಸೇನೆಯಿಂದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರಿಗೆ ಮಂಗಳವಾರದಂದು ಮನವಿ ಸಲ್ಲಿಸಲಾಯಿತು.
ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಅವರ ನೇತೃತ್ವದಲ್ಲಿ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ದೇಶದ್ರೋಹಿಗಳು ಧಾರವಾಡದಲ್ಲಿ ಓಡಾಡುತ್ತಿದ್ದಾರೆಂಬ ಶಾಸಕ ಅರವಿಂದ ಬೆಲ್ಲದ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸುವುದಾಗಿ ಹೇಳಿದರು.
ಅವಳಿ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚುತ್ತಿವೆ. ಗಾಂಜಾ, ಗೋಹತ್ಯೆ, ಕೊಲೆ, ಲವ್ ಜಿಹಾದ್ನಂತಹ ಚಟುವಟಿಕೆಗಳು ಹೆಚ್ಚುತ್ತಿವೆ. ಇವುಗಳ ಜತೆಗೆ ದೇಶದ್ರೋಹಿ ಚಟುವಟಿಕೆಗಳು ಸಹ ಪಸರಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಗುಜರಾತಿನಿಂದ 15 ರಿಂದ 50 ವರ್ಷದವರು ಧರ್ಮ ಪ್ರಚಾರಕ್ಕೆ ಆಗಮಿಸಿದ್ದಾರೆಂದು ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ. ಆದರೆ, 15 ವರ್ಷದವರು ಧರ್ಮ ಪ್ರಚಾರ ಮಾಡಲು ಸಾಧ್ಯವೇ ? ಎಂದು ಪ್ರಶ್ನಿಸಿರುವ ಶ್ರೀರಾಮ ಸೇನೆ ಕಾರ್ಯಕರ್ತರು, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದರು.
ಮೂರ್ನಾಲ್ಕು ವರ್ಷಗಳ ಹಿಂದೆ ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಹಾಗೂ ಹುಬ್ಬಳ್ಳಿಯ ಗಣೇಶಪೇಟನ್ನು ಪಾಕಿಸ್ತಾನವೆಂದು ಸಾರಿದ್ದವರನ್ನು ಗಡಿಪಾರು ಮಾಡಬೇಕು. ಮಸಿದಿ, ಮದರಸಾ, ಖಬರಿಸ್ತಾನ, ದರ್ಗಾ ಮತ್ತಿತರೆಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಬೇಕು ಎಂದು ಒತ್ತಾಯಿಸಿದರು.
ಹುಬ್ಬಳ್ಳಿಯ ಕುಂದಗೋಳ ಕ್ರಾಸ್, ಇಸ್ಲಾಂಪುರ, ಮಾವನೂರ ರಸ್ತೆ, ಹಿರೇಹೊನ್ನಳ್ಳಿ ರೋಡ, ಬಾನಗಿತ್ತಿ, ಗುಡಿಹಾಳ, ಹಳ್ಯಾಳ-ಕಡಪಟ್ಟಿ, ಗುಡಿಹಾಳ ರೋಡ, ಸಂಗೊಳ್ಳಿ ರಾಯಣ್ಣ ನಗರ ಹಾಗೂ ಧಾರವಾಡದ ವಿವಿಧೆಡೆ ಅಕ್ರಮವಾಗಿ ಮದರಸಾ ಕಟ್ಟಲಾಗುತ್ತಿದೆ. ಹೊಸ ಬಡಾವಣೆಗಳಲ್ಲಿ ವಸತಿಗೆಂದು ನಿವೇಶನ ಖರೀದಿಸಿ, ಮಸೀದಿ, ಮದರಾಸಗಳನ್ನು ನಿರ್ವಿುಸುತ್ತಿರುವ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯ ಮಾಡಿದರು.
ಮಂಜು ಕಾಟಕರ, ಅಣ್ಣಪ್ಪ ದಿವಟಗಿ, ಬಸು ದುರ್ಗದ, ಬಸವರಾಜ ಗೌಡರ, ಮಹಾಂತೇಶ ಟೊಂಗಳಿ, ಗುಣಧರ ದಢೋತಿ, ವೀರಯ್ಯ ಸಾಲಿಮಠ, ಪ್ರವೀಣ ಮಾಳದಕರ ಹಾಗೂ ಇತರರು ಹಾಜರಿದ್ದರು.