ಅವ್ಯವಹಾರ ತನಿಖೆ ಮಾಡಿ

ಬಾದಾಮಿ ಪಟ್ಟಣದ ಪಿಕೆಪಿಎಸ್ ಮುಂಭಾಗ ಅನರ್ಹಗೊಂಡ ಮತದಾರರ ಪರವಾಗಿ ಕೆಲ ಪ್ರಮುಖ ಮತದಾರರ ಪಿಕೆಪಿಎಸ್ ಕ್ರಮವನ್ನು ಖಂಡಿಸಿದರು. ಅಶೋಕ ಕೋಟನಕರ, ಶಂಕ್ರಪ್ಪ ಗಾಣಿಗೇರ, ಬಸವರಾಜ ತೀರ್ಥಪ್ಪನವರ, ಶಂಕರಗೌಡ ಪಾಟೀಲ ಇತರರಿದ್ದರು.
ಬಾದಾಮಿ ಪಟ್ಟಣದ ಪಿಕೆಪಿಎಸ್ ಮುಂಭಾಗ ಅನರ್ಹಗೊಂಡ ಮತದಾರರ ಪರವಾಗಿ ಕೆಲ ಪ್ರಮುಖ ಮತದಾರರ ಪಿಕೆಪಿಎಸ್ ಕ್ರಮವನ್ನು ಖಂಡಿಸಿದರು. ಅಶೋಕ ಕೋಟನಕರ, ಶಂಕ್ರಪ್ಪ ಗಾಣಿಗೇರ, ಬಸವರಾಜ ತೀರ್ಥಪ್ಪನವರ, ಶಂಕರಗೌಡ ಪಾಟೀಲ ಇತರರಿದ್ದರು.
Published on

ಬಾದಾಮಿ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದಲ್ಲಿ ದುರುದ್ದೇಶಪೂರ್ವಕವಾಗಿ ಅರ್ಹ ಮತದಾರರನ್ನು ಅನರ್ಹಗೊಳಿಸಿ ಚುನಾವಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅನರ್ಹಗೊಂಡ ಮತದಾರರು ಶುಕ್ರವಾರ ಸಂಘದ ಎದುರಿಗೆ ಪ್ರತಿಭಟನೆ ನಡೆಸಿದರು.
ಅಶೋಕ ಕೋಟನಕರ ಮಾತನಾಡಿ, ಸಾಲಗಾರ ಮತ್ತು ಬಿನ್ ಸಾಲಗಾರ ಮತದಾರರನ್ನು ಏಕಪಕ್ಷೀಯವಾಗಿ ಮತದಾರರ ಪಟ್ಟಿಯಿಂದ ಕೈಬಿಟ್ಟು ತಮಗೆ ಬೇಕಾದ ಮತದಾರರನ್ನು ಮಾತ್ರ ಪಟ್ಟಿಯಲ್ಲಿ ಇಡಲಾಗಿದೆ. 1268 ಸಾಲಗಾರ ಮತದಾರರಲ್ಲಿ 802 ಮತದಾರರನ್ನು ಅನರ್ಹಗೊಳಿಸಿ ಕೇವಲ 466 ಮತದಾರರನ್ನು ಮಾತ್ರ ಪಟ್ಟಿಯಲ್ಲಿ ಉಳಿಸಲಾಗಿದೆ. ಅದೇ ರೀತಿ 717 ಬಿನ್ ಸಾಲಗಾರ ಮತದಾರರಲ್ಲಿ 617 ಮತದಾರರನ್ನು ಅನರ್ಹಗೊಳಿಸಿ ಕೇವಲ 100 ಜನ ಮತದಾರರನ್ನು ಮಾತ್ರ ಉಳಿಸಲಾಗಿದೆ ಎಂದು ಅಂಕಿ ಅಂಶ ನೀಡಿದರು.
ಒಟ್ಟು 1985 ಜನ ಮತದಾರರಲ್ಲಿ ಕೇವಲ 566 ಮತದಾರರನ್ನು ಉಳಿಸುವ ಮೂಲಕ 1419 ಮತದಾರರನ್ನು ಅನರ್ಹಗೊಳಿಸಿದ್ದಾರೆ. ಇದೊಂದು ಪೂರ್ವನಿಯೋಜಿತ ಕಾರ್ಯವಾಗಿದ್ದು, ಇದರಲ್ಲಿ ಸಂಘದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಾಮೀಲಾಗಿ ನಮ್ಮ ಸಂವಿಧಾನಬದ್ಧ ಹಕ್ಕು ಕಸಿದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಏಳಿಗೆಗಾಗಿ ಹಣಕಾಸಿನ ವಹಿವಾಟು ನಡೆಸುವ ಸಂಸ್ಥೆಯನ್ನು ಸ್ವಂತಕ್ಕೆ ಬಳಸಿಕೊಳ್ಳುವ ಹುನ್ನಾರ ಕಂಡು ಬರುತ್ತಿದೆ. ರೈತ ಮತದಾರರನ್ನು ಅನರ್ಹಗೊಳಿಸಿ ಸಂಘವನ್ನು ಕೆಲವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಶಂಕ್ರಪ್ಪ ಗಾಣಿಗೇರ ಮಾತನಾಡಿ, ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ಚುನಾವಣೆಯಲ್ಲಿ ಗೆಲ್ಲುವಂತೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿರುವ ಅನುಮಾನ ನಮಗೆ ಬರುತ್ತಿದೆ. ಒಂದು ವೇಳೆ ಬೇರೆ ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸಿದರೆ ಅವರಿಗೆ ಗೆಲುವಿನ ಮತಗಳು ಲಭಿಸುವ ಕಷ್ಟಸಾಧ್ಯವಾಗಿದೆ. ಸ್ಪರ್ಧಿಗಳ ಸಂಬಂಧಿಕರು ಮಾತ್ರ ಮತದಾರರ ಪಟ್ಟಿಯಲ್ಲಿದ್ದಾರೆ ಎಂದು ದೂರಿದರು.
ಸಭೆಯ ನಡಾವಳಿಗಳು, ಕೈಗೊಂಡಿರುವ ನಿರ್ಣಯಗಳ ಬಗ್ಗೆ ಮಾಹಿತಿ ಒದಗಿಸುವಂತೆ ಮನವಿ ಮಾಡಿದರೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸ್ಪಂದಿಸುತ್ತಿಲ್ಲ. ಠರಾವು ಸೇರಿದಂತೆ ಇನ್ನಿತರ ದಾಖಲೆಗಳನ್ನು ಕೇಳಿದರೆ ನಮ್ಮಲ್ಲಿ ಇಲ್ಲ ಎಂಬ ಹಾರಿಕೆ ಉತ್ತರವನ್ನು ನೀಡಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಉಪ ನಿಬಂಧಕರು ಕೂಡಲೇ ಮಧ್ಯ ಪ್ರವೇಶಿಸಿ ಈ ಚುನಾವಣೆಯನ್ನು ಮುಂದೂಡುವುದರ ಜತೆಗೆ ಪಾರದರ್ಶಕ ಚುನಾವಣೆಗೆ ಅವಕಾಶ ಮಾಡಿಕೊಡಬೇಕು. ಜತೆಗೆ ಇಲ್ಲಿನ ಅವ್ಯವಹಾರಗಳನ್ನು ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಸವರಾಜ ತೀರ್ಥಪ್ಪನವರ, ಶಂಕರಗೌಡ ಪಾಟೀಲ, ಪ್ರಕಾಶ ನಡಮನಿ, ಶಿವು ಕಿರಗಿ, ಮಹಾಗುಂಡಪ್ಪ ತೀರ್ಥಪ್ಪನವರ, ಚಂದ್ರು ಸೂಡಿ, ಹುಚ್ಚಪ್ಪ ಹದ್ದನ್ನವರ, ಮಂಜುನಾಥ ಕಾಗಿ, ಹನುಮಪ್ಪ ಕಾಟನ್ನವರ, ಮಂಜುನಾಥ ಕಲ್ಮಠ, ಸಲೀಮ ನರಗುಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net