ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಿ

DSC_0113---05
Published on

ಚಿತ್ರದುರ್ಗ: ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಗಾಂಧಿ ವೃತ್ತದ ಬಳಿ ಜಮಾಯಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದರು. ಚಿತ್ರದುರ್ಗದ ಬಿಜೆಪಿ ಶಾಸಕರ ಭ್ರಷ್ಟಾಚಾರದಿಂದ ನೊಂದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ರಾಜ್ಯಪಾಲರು, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಸ್ಮಾರ್ಟ್ ಸಿಟಿ ಮಾದರಿಯ ರಸ್ತೆ ವಿಸ್ತರಣೆ, ಜಿಲ್ಲಾಸ್ಪತ್ರೆ ಔಷಧ ಸರಬರಾಜು, ಚರಂಡಿ, ಆರೋಗ್ಯ ಇಲಾಖೆಯ ಕಟ್ಟಡ ನಿರ್ಮಾಣ ಸೇರಿ ಹಲವು ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ಪಡೆದಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಕಾರ್ಯಾಧ್ಯಕ್ಷ ಮಂಜುನಾಥ್ ಗಂಭೀರ ಆರೋಪ ಮಾಡಿದ್ದು, ನ್ಯಾಯಮೂರ್ತಿ ಅವರಿಂದಲೇ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ನಗರದಲ್ಲಿ ಅಗತ್ಯ ಇಲ್ಲದಿದ್ದರೂ ರಸ್ತೆ ವಿಭಜಕಗಳ ನಿರ್ಮಾಣ, ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲು 6 ಲಕ್ಷ ರೂ., ಎಸ್ಸಿ, ಎಸ್ಟಿಗೆ ಕಾರು ಸಾಲಕ್ಕೆ 2 ಲಕ್ಷ ರೂ., ಗಂಗಾಕಲ್ಯಾಣದಡಿ ಕೊಳವೆಬಾವಿ ಕೊರೆಸಲು 30 ಸಾವಿರ, ವಾಟರ್ ಫಿಲ್ಟರ್‌ಗಳಿಗೆ 10 ಸಾವಿರ ರೂ. ಈ ರೀತಿ ಎಲ್ಲ ಯೋಜನೆಯಲ್ಲೂ ಕಮಿಷನ್ ಪಡೆದಿದ್ದಾರೆ ಎಂಬ

ಆಪಾದನೆ ಶಾಸಕರ ಮೇಲಿದೆ ಎಂದು ದೂರಿದ ಪ್ರತಿಭಟನಾಕಾರರು, ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಗರ ವ್ಯಾಪ್ತಿಯಲ್ಲಿ 124 ಕುಟುಂಬಗಳಿಂದ ತಲಾ 2 ಲಕ್ಷ ರೂ. ಪಡೆದು ಆಶ್ರಯ ಮನೆಗಳನ್ನು ನೀಡದೆ ಹಕ್ಕುಪತ್ರ ಹಂಚಿ ಅನ್ಯಾಯ ಮಾಡಿದ್ದಾರೆ ಎಂಬ ಆರೋಪವೂ ಶಾಸಕರ ಮೇಲಿದೆ. ನೊಂದವರೇ ಈ ಕುರಿತು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ಇದರ ಬಗ್ಗೆಯೂ ಕುಲಂಕುಶ ತನಿಖೆಯಾಗಲಿ ಎಂದು ಕೋರಿದರು.

ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಮುಖಂಡ ಹನುಮಲಿ ಷಣ್ಮುಖಪ್ಪ, ಮಾಜಿ ಎಂಎಲ್ಸಿ ರಘು ಆಚಾರ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಮುಖಂಡರಾದ ಎಚ್.ಮಂಜಪ್ಪ, ಡಿ.ಟಿ.ವೆಂಕಟೇಶ್, ಓ.ಶಂಕರ್, ಎಲ್.ತಿಪ್ಪೇಸ್ವಾಮಿ, ಬಿ.ಟಿ.ಜಗದೀಶ್, ಡಿ.ಎನ್.ಮೈಲಾರಪ್ಪ, ಆರ್.ಕೆ. ಸರ್ದಾರ್, ಮುನಿರಾ ಎ.ಮಕಾಂದಾರ್, ಗೀತಾ ನಂದಿನಿಗೌಡ, ಎಚ್.ಅಂಜಿನಪ್ಪ, ಅಬ್ದುಲ್ಲಾ, ಎನ್.ಡಿ.ಕುಮಾರ್, ಬಾಲಕೃಷ್ಣಯಾದವ್, ಅಶೋಕ್ ನಾಯ್ಡು, ಜಯಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net