

ಹುಬ್ಬಳ್ಳಿ: ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ಹಾಗೂ ಬಹು ನಿರೀಕ್ಷಿತ ಇನ್ವೆಸ್ಟ್ ಕರ್ನಾಟಕ- ಹುಬ್ಬಳ್ಳಿ ಸಮಾವೇಶಕ್ಕೆ ನಗರದ ಡೆನಿಸನ್ಸ್ ಹೋಟೆಲ್ನಲ್ಲಿ ಸಿದ್ಧತೆ ಪೂರ್ಣಗೊಂಡಿವೆ. ಫೆ.14ರ ಬೆಳಗ್ಗೆಯಿಂದ ಸಂಜೆವರೆಗೆ ಹೂಡಿಕೆದಾರರು ಹಾಗೂ ಸರ್ಕಾರದ ಮಧ್ಯೆ ವಿಸ್ತ್ರತ ಚರ್ಚೆ, ಒಪ್ಪಂದ ಏರ್ಪಡಲಿವೆ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಸದಾ ಸಿದ್ಧ ಎಂಬುದನ್ನು ಸಾರಲು ಇದು ಒಂದು ವೇದಿಕೆಯಾಗಿದ್ದು, ಅದಕ್ಕಾಗಿ ಸಂಪೂರ್ಣ ತಯಾರಿ ನಡೆದಿದೆ.
ಹುಬ್ಬಳ್ಳಿ ಸಮಾವೇಶದ ಮೂಲಕ ಬೆಂಗಳೂರು ನಂತರ ರಾಜ್ಯದ ದ್ವಿತೀಯ ಸ್ತರದ ನಗರಗಳನ್ನು ಅಭಿವೃದ್ಧಿ ಪಡಿಸಲು ಹಾಗೂ ಇಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಇನ್ವೆಸ್ಟ್ ಕರ್ನಾಟಕ ವರದಾನವಾಗಲಿದೆ. ದೇಶ- ವಿದೇಶದ ನೂರಾರು ಉದ್ಯಮಿಗಳು ಪಾಲ್ಗೊಳ್ಳುವುದು ಖಚಿತವಾಗಿದ್ದು, ಸಮಾವೇಶ ಯಶಸ್ವಿಯಾಗುವ ವಿಶ್ವಾಸ ಆಯೋಜಕರಲ್ಲಿದೆ. ಹುಬ್ಬಳ್ಳಿಯವರೇ ಆದ ಜಗದೀಶ ಶೆಟ್ಟರ್ ಕೈಗಾರಿಕೆ ಮಂತ್ರಿಯಾಗಿ ಹೆಚ್ಚು ಮುತುವರ್ಜಿ ವಹಿಸಿದ್ದಾರೆ. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಕೂಡ ದೇಶದ ವಿವಿಧೆಡೆಯ ಹೂಡಿಕೆದಾರರ ಗಮನ ಸೆಳೆದಿದ್ದಾರೆ. ಮುಂಬೈ, ಹೈದರಾಬಾದ್ ಮುಂತಾದೆಡೆ ರೋಡ್ ಶೋ ನಡೆಸಿ ಉದ್ಯಮಿಗಳಿಗೆ ಆಹ್ವಾನ ನೀಡಲಾಗಿದೆ.
ಉದ್ಘಾಟನೆ
ಫೆ. 14ರ ಬೆಳಗ್ಗೆ 10.30ಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಸಮಾವೇಶ ಉದ್ಘಾಟಿಸುವರು. ಸಚಿವ ಜಗದೀಶ ಶೆಟ್ಟರ್ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಡಿ.ವಿ. ಸದಾನಂದಗೌಡ, ಸುರೇಶ ಅಂಗಡಿ, ಈ ಭಾಗದ ಶಾಸಕರು ಅತಿಥಿಗಳಾಗಿ ಪಾಲ್ಗೊಳ್ಳುವರು.