ಇನ್ವೆಸ್ಟ್ ಕರ್ನಾಟಕ-2025 ಯಶಸ್ವಿ, ತವರು ಜಿಲ್ಲೆಗೆ ಸಚಿವ ಎಂ.ಬಿ. ಪಾಟೀಲರ ಕೊಡುಗೆ ಏನು ಗೊತ್ತಾ?

mb patil byte
Published on

ವಿಜಯಪುರ: ‘ಪ್ರಗತಿಯ ಮರು ಪರಿಕಲ್ಪನೆ, ಹಸಿರೀಕರಣ, ಸರ್ವರ ಸಹಭಾಗಿತ್ವ ಹಾಗೂ ಕ್ಷಿಪ್ರಗತಿಯ ಬದಲಾವಣೆ ಎದುರಿಸುವ ಸಾಮರ್ಥ್ಯ ಹೊಂದುವ’ ಮಹತ್ತರ ಉದ್ದೇಶಗಳೊಂದಿಗೆ ಬೆಂಗಳೂರಿನಲ್ಲಿ ನಡೆದ ಐತಿಹಾಸಕ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ‘ಇನ್ವೆಸ್ಟ್ ಕರ್ನಾಟಕ-2025’ ಅತ್ಯಂತ ಯಶಸ್ವಿಯಾಗಿದ್ದು, ವಿಜಯಪುರ ಜಿಲ್ಲೆಗೆ ಕನಿಷ್ಠ 1 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡುವ ಮೂಲಕ 15 ಸಾವಿರ ಉದ್ಯೋಗ ಸೃಷ್ಠಿಸುವ ಗುರಿ ಹಮ್ಮಿಕೊಳ್ಳಲಾಗಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ. ಬಿ. ಪಾಟೀಲ ಹೇಳಿದರು.

ಪ್ರಪ್ರಥಮ ಬಾರಿಗೆ ಪ್ರಪಂಚದ 60 ಕ್ಕೂ ಅಧಿಕ ಪರಿಣಿತರು, ಉದ್ದಿಮೆದಾರರು ಭಾಗವಹಿಸಿದ್ದ ಈ ಮೇಳದಲ್ಲಿ ಉತ್ತರ ಕರ್ನಾಟಕದಲ್ಲಿ ಬಂಡವಾಳ ಹೂಡಲು ಅನೇಕರು ಮುಂದೆ ಬಂದಿದ್ದಾರೆ. ಒಟ್ಟು 10.27 ಲಕ್ಷ ಕೋಟಿ ಬಂಡವಾಳ ಹೂಡಿಕೆ ಒಪ್ಪಂದವಾಗಿದ್ದು ಆರು ಲಕ್ಷ ಜನರಿಗೆ ಉದ್ಯೋಗವಕಾಶ ಸಿಗಲಿದೆ. ಅದರಲ್ಲಿ ಶೇ.75 ರಷ್ಟು ಬೆಂಗಳೂರು ಹೊರತು ಪಡಿಸಿ ಮತ್ತು ಶೇ. 45 ರಷ್ಟು ಉತ್ತರ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಯಾಗಲಿದೆ. ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಪಾಲಿಗೆ ಇದೊಂದು ಆಶಾದಾಯಕ ಬೆಳವಣಿಗೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಜಗತ್ತು ಬದಲಾವಣೆ ಆಗುತ್ತಿದೆ. ಆರ್ಟಿಫಿಸಿಯಲ್ ಇಂಟಿಲಿಜೆನ್ಸ್ ಸದ್ಯ ಎಲ್ಲ ಕ್ಷೇತ್ರಗಳಿಗೂ ನುಗ್ಗುತ್ತಿದೆ. ರೋಬೋಟ್ ಬರುತ್ತಿವೆ. ಮನುಷ್ಯರ ಕೆಲಸ ರೋಬೋಟ್ ಕಸಿದುಕೊಳ್ಳುತ್ತಿವೆ. ಗ್ರೀನ್ ಹೈಡ್ರೋಜನ್, ಪವನ ಶಕ್ತಿ, ಸೌರ ಶಕ್ತಿ ಹಾಗೂ ಅಣು ವಿದ್ಯುತ್ ಸ್ಥಾವರ ಕ್ಷೇತ್ರ ಹೀಗೆ ಮುಂತಾದ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುತ್ತಿವೆ. ಹೀಗಾಗಿ ಪ್ರಗತಿಯ ಪರಿಕಲ್ಪನೆಯೇ ಸಂಪೂರ್ಣ ಬದಲಾಗಿದೆ. ಈ ಬದಲಾದ ಪ್ರಗತಿಯ ಪರಿಕಲ್ಪನೆಯ ತತ್ವದಡಿ ಬಂಡವಾಳ ಹೂಡಿಕೆಗೆ ಬಲವಾದ ಅಡಿಪಾಯ ಹಾಕಿರುವುದಾಗಿ ತಿಳಿಸಿದರು.

ಬೆಂಗಳೂರು ಅರ್ಬನ್ ಬಿಟ್ಟು, ಬೆಂಗಳೂರು ಗ್ರಾಮಾಂತರದಲ್ಲಿ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಉಳಿದಂತೆ ಈಗಾಗಲೇ ರಾಜ್ಯದೆಲ್ಲೆಡೆ ವಲಯವಾರು ಪ್ರೋತ್ಸಾಹ ವ್ಯವಸ್ಥೆ ಇದೆ. ಇದನ್ನು ಹೊರತು ಪಡಿಸಿ ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ತಾಲೂಕು ಇದ್ದರೆ ಶೇ.3 ಹಾಗೂ ಅತ್ಯಂತ ಹಿಂದುಳಿದ ತಾಲೂಕಿಗೆ ಶೇ. 5 ರಷ್ಟು ಪ್ರೋತ್ಸಾಹ ಧನ ನೀಡಲು ಕ್ರಮವಹಿಸಲಾಗಿದೆ. ತ್ವರಿತವಾಗಿ ಪರಿವಾನಿಗೆ ನೀಡಲು ‘ಏಕ ಗವಾಕ್ಷಿ ವ್ಯವಸ್ಥೆ’ ಜಾರಿಗೊಳಿಸಲಾಗುತ್ತಿದೆ. ಉದ್ಯಮ ಸ್ನೇಹಿ ವಾತಾವರಣ ಸೃಷ್ಠಿಸಲಾಗುತ್ತಿದೆ ಎಂದರು.

ತವರಿಗೂ ಮಹತ್ತರ ಕಾಣಿಕೆ

ವಿಜಯಪುರದಲ್ಲಿ ಸರಿಸುಮಾರು 42 ಸಾವಿರ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ ಇದೆ. ಶೇ. 80ರಷ್ಟು ವಿಜಯಪುರದಲ್ಲಿಯೇ ಸ್ಥಳ ಗುರುತಿಸಲಾಗಿದೆ. ಸುಜ್ಲಾನ್ ಎನರ್ಜಿ ಲಿಮಿಟೆಡ್‌ನಿಂದ 21950 ಕೋಟಿ ವೆಚ್ಚದಲ್ಲಿ 3000 ಮೆಗಾ ವ್ಯಾಟ್‌ನ ಪವನ ವಿದ್ಯುತ್ ಘಟಕ ಸ್ಥಾಪಿಸಲಾಗುತ್ತಿದ್ದು, ಇದರಿಂದ 4200 ಜನರಿಗೆ ಉದ್ಯೋಗ ಸಿಗಲಿದೆ. ವಿಂಗ್ಸ್ ಅಗ್ರಿಕಲ್ಚರ್ ಪ್ರೈವೆಟ್ ಲಿಮಿಟೆಡ್‌ನವರು 350 ಕೋಟಿ ವೆಚ್ಚದಲ್ಲಿ ಕೃಷಿ ಸಂಸ್ಕರಣಾ ಘಟಕ ಸ್ಥಾಪಿಸುತ್ತಿದ್ದು, 450 ಉದ್ಯೋಗ ಅವಕಾಶಗಳು ಸೃಷ್ಠಿಯಾಗಲಿವೆ.

ಎಂಎಟಿ ಪ್ರೈವೇಟ್ ಲಿಮಿಟ್‌ನಿಂದ 300 ಕೋಟಿ ರೂಪ ವೆಚ್ಚದಲ್ಲಿ ವಿಶ್ವ ದರ್ಜೆ ವಿಮಾನ ತರಬೇತಿ ಸಂಸ್ಥೆ ಸ್ಥಾಪಿಸಲಾಗುತ್ತಿದ್ದು 100 ಉದ್ಯೋಗವಕಾಶಗಳು ಸೃಷ್ಠಿಯಾಗಲಿವೆ. ನವೋದಯ ಸೋಲಾರ್ ಮತ್ತು ಇಲೆಕ್ಟ್ರಾನಿಕ್ ಮೆಟೀರಿಯಲ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ 5000 ಕೋಟಿ ರೂ.ವೆಚ್ಚದಲ್ಲಿ ಸೌರ ಇಟ್ಟಿಗೆಗಳ ತಯಾರಿಕೆ ಘಟಕ ಸ್ಥಾಪಿಸಲಾಗುತ್ತಿದೆ. ಇದರಿಂದ 1300 ಉದ್ಯೋಗವಕಾಶಗಳು ಸಿಗಲಿವೆ. ಹೆಕ್ಸಾ ಕ್ಲೈಮೇಟ್ ಸೊಲೂಶನ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ 8000 ಕೋಟಿ ರೂ.ವೆಚ್ಚದಲ್ಲಿ ಬ್ಯಾಟರಿ ಶೇಖರಣಾ ವ್ಯವಸ್ಥೆಗಳ ಅಭಿವೃದ್ಧಿ ಘಟಕ ಸ್ಥಾಪಿಸುತ್ತಿದ್ದು ಇದರಿಂದ 200 ಉದ್ಯೋಗ ಅವಕಾಶಗಳು ಸಿಕಲಿವೆ. ಒಟ್ಟಾರೆಯಾಗಿ ಒಂದು ಲಕ್ಷ ಕೋಟಿ ಕನಿಷ್ಠ ಬಂಡವಾಳ ಜಿಲ್ಲೆಗೆ ಹೂಡಿಕೆಯಾಗಬೇಕೆಂಬುದು ನನ್ನ ಗುರಿ. ಕನಿಷ್ಠ ಹದಿನೈದು ಸಾವಿರ ಉದ್ಯೋಗ ಸೃಷ್ಠಿ ಯಾಗಬೇಕೆಂಬುದು ನನ್ನ ಬಯಕೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net