

ತುಮಕೂರು : ಕೈಗಾರಿಕಾ ವಲಯದಲ್ಲಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಇನ್ವೆಸ್ಟ್ ಕರ್ನಾಟಕ-2022 ಆಯೋಜಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ನಗರ ಹೊರವಲಯದ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2010-11ರಲ್ಲಿ ಇನ್ವೆಸ್ಟ್ ಕರ್ನಾಟಕ ನಡೆಸಲಾಗಿದೆ. ಅದೇ ಮಾದರಿಯಲ್ಲಿ 2022ರಲ್ಲಿ ನಡೆಸುವ ಸಂಬಂಧ ಸದ್ಯದಲ್ಲೇ ದಿನಾಂಕ ನಿಗದಿಗೊಳಿಸಲಾಗುವುದು. ಈ ಸಂಬಂಧ ಸಿಎಂ ಜತೆ ಚರ್ಚಿಸಲಾಗುವುದು ಎಂದರು.
ರಾಜ್ಯದ ಕೈಗಾರಿಕಾ ವಲಯದಲ್ಲಿ ಜಾಗತಿಕ ಮಟ್ಟದ ಬಂಡವಾಳದಾರರಿಗೆ ಹೂಡಿಕೆ ಮಾಡಲು ಉತ್ತೇಜನ ಹಾಗೂ ಹೆಚ್ಚು ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ನಿರ್ಮಿಸಲಾಗುವುದು. ಈ ಮೂಲಕ ರಾಜ್ಯದಲ್ಲಿ ಕನಿಷ್ಠ 5 ಲಕ್ಷ ಉದ್ಯೋಗ ಸೃಷ್ಟಿಯಾಗಬೇಕು ಎಂಬುದು ನಮ್ಮ ಸಂಕಲ್ಪವಾಗಿದೆ ಎಂದು ನಿರಾಣಿ ಹೇಳಿದರು.
ಮೊದಲ ಫುಡ್‌ಪಾರ್ಕ್: ವಸಂತನರಸಾಪುರ ಕೈಗಾರಿಕಾ ಪ್ರದೇಶದ ಫುಡ್‌ಪಾರ್ಕ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು ಸಾವಿರ ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ. ಇದು ರಾಜ್ಯದ ಮೊದಲನೇ ಫುಡ್‌ಪಾರ್ಕ್ ಆಗಿದ್ದು ವಿವಿಧ ರೀತಿಯಲ್ಲಿ ಆಹಾರ ಪದಾರ್ಥಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಮಾಡಲಾಗುತ್ತಿದೆ ಎಂದು ನಿರಾಣೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸರೋಜಿನಿ ಮಹಿಷಿ ವರದಿಯಂತೆ ಶೇ.80 ಸ್ಥಳೀಯರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಮೀಸಲಿಡಬೇಕಿದೆ. ಫುಡ್‌ಪಾರ್ಕ್‌ನಲ್ಲಿ ಶೇ.80ಕ್ಕಿಂತ ಹೆಚ್ಚು ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ಉದ್ದೇಶ ಇದೆ. ಆದರೆ, ಅದಕ್ಕೆ ತಕ್ಕಂತೆ ಕೌಶಲ ಕೊರತೆ ಇರುವುದರಿಂದ ಸ್ಥಳೀಯರ ಸಂಖ್ಯೆ ಕಡಿಮೆ ಇದೆ ಎಂದು ಸ್ಪಷ್ಟಪಡಿಸಿದರು.
ಕಾಮಗಾರಿ ವೀಕ್ಷಣೆ: ವಸಂತನರಸಾಪುರದಲ್ಲಿ ಮಷಿನ್‌ಟೂಲ್ ಪಾರ್ಕ್, ಟ್ರೀಟೆಡ್ ವಾಟರ್ ಪ್ಲಾಂಟ್ ನಿರ್ಮಾಣ ಸೇರಿ ವಿವಿಧ ಕೈಗಾರಿಕೆಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ವೀಕ್ಷಿಸಿದ ಸಚಿವ ನಿರಾಣಿ, ಕೈಗಾರಿಕೆ ಸ್ಥಾಪಿಸುವವರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೆಐಎಡಿಬಿ ಸಿಇಒ ಡಾ.ಶಿವಶಂಕರ್, ಮುಖ್ಯ ಇಂಜಿನಿಯರ್ ಬಿ.ಕೆ.ಪವಿತ್ರ, ಕಾರ್ಯನಿರ್ವಾಹಕ ಇಂಜಿನಿಯರ್ ಸುನಿಲ್, ವಿಶೇಷ ಭೂಸ್ವಾಧೀನಾಧಿಕಾರಿ ಡಾ.ಶಿವರಾಂ ಭಂಡಾರಿ, ತುಮಕೂರು ವಿಶೇಷ ಭೂಸ್ವಾಧೀನಾಧಿಕಾರಿ ತಬಸ್ಸಮ್ ಜಹೇರಾ, ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಬಿ.ನಾಗೇಶ್, ಫುಡ್‌ಪಾರ್ಕ್ ಅಧಿಕಾರಿ ಕರಣ್ ಕೇಟ್ ಮತ್ತಿತರರು ಉಪಸ್ಥಿತರಿದ್ದರು.
ಮಾದರಿ ಕೈಗಾರಿಕಾ ಪ್ರದೇಶ : ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಎಲ್ಲ ಸವಲತ್ತುಗಳನ್ನು ಸರ್ಕಾರ ಒದಗಿಸುತ್ತಿದೆ. ಇದು ಸಮರ್ಪಕವಾಗಿ ಬಳಕೆಯಾಗಬೇಕು. ಇಡೀ ವಿಶ್ವದಲ್ಲೇ ಕೈಗಾರಿಕಾ ಪ್ರದೇಶ ಮಾದರಿಯಾಗಿರಬೇಕು. ಯಾವುದೇ ರೀತಿಯ ಮೂಲಸೌಕರ್ಯದ ಕೊರತೆ ಎದುರಾಗಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸುವಂತೆ ಮುರುಗೇಶ್ ನಿರಾಣಿ ತಾಕೀತು ಮಾಡಿದರು.