ಶ್ರಮ ಸಂಸ್ಕೃತಿಯ ಸಂಶೋಧಕ

h29- Basava Kendra Kalburgi
Published on

ಹುಬ್ಬಳ್ಳಿ: ಅಧ್ಯಯನ, ಸಂಶೋಧನೆಯೊಂದಿಗೆ ಶ್ರಮ ಸಂಸ್ಕೃತಿ ಹೊಂದಿದ್ದ ಶ್ರೇಷ್ಠ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರು ತಾವು ದುಡಿಯುವುದರ ಜತೆಗೆ ಇತರರನ್ನು ದುಡಿಯಲು ಹಚ್ಚುತ್ತಿದ್ದರು, ವಚನಗಳ ಸಂಶೋಧನೆ, ಸಂಪಾದನೆಯಲ್ಲಿ ಅವರು ಅದ್ಭುತ ಕಾರ್ಯ ಮಾಡಿದರು ಎಂದು ಬಸವ ಕೇಂದ್ರದ ಅಧ್ಯಕ್ಷ ಡಾ. ಬಿ.ವಿ. ಶಿರೂರ ಹೇಳಿದರು.

ನಗರದ ಬಸವ ಕೇಂದ್ರದ ಬಸವ ಸಂಸ್ಕೃತಿ ಶಾಲೆಯಲ್ಲಿ ನಡೆದ ವಾರ್ಷಿಕ ಸಭೆ, ಲಿಂ. ಡಾ. ಎಂ.ಎಂ. ಕಲಬುರ್ಗಿ 82ನೇ ಜನ್ಮದಿನಾಚರಣೆ ಹಾಗೂ ಪ್ರೊ. ಎಸ್.ಸಿ. ಇಂಡಿ ಅವರ ಶರಣರ ವಚನಗಳಲ್ಲಿ ವ್ಯಕ್ತಿತ್ವ ವಿಕಸನ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬುವ ಕಾರ್ಯ ಮಾಡಿದ್ದರಿಂದಲೇ ಡಾ. ಕಲಬುರ್ಗಿ ಅವರು ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ವಿದ್ಯಾರ್ಥಿಗಳ ವರ್ಗ ಕೋಣೆ ನನ್ನ ಪಾಲಿಗೆ ಬಂಗಾರ ಶುದ್ಧೀಕರಿಸುವ ಕೋಣೆಯಂತೆ ಎಂದು ಸದಾ ಅವರು ಹೇಳುತ್ತಿದ್ದರು ಎಂದು ಸ್ಮರಿಸಿದರು.

ಸಾಹಿತಿ ಪ್ರೊ. ಎಸ್.ವಿ. ಪಟ್ಟಣಶೆಟ್ಟಿ ಮಾತನಾಡಿ, ಬದುಕಿರುವುದು ಕನ್ನಡ ಹಾಗೂ ಬಸವಣ್ಣನವರಿಗಾಗಿ ಎಂದು ಡಾ. ಕಲಬುರ್ಗಿ ಯಾವಾಗಲೂ ಹೇಳುತ್ತಿದ್ದರು. ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ನಂತರ ವಚನ ಸಾಹಿತ್ಯಕ್ಕೆ ಇವರ ಕೊಡುಗೆ ಶ್ರೇಷ್ಠ ಹಾಗೂ ಮರೆಯಲಾರದಂತಹದ್ದು ಎಂದರು.

ಪ್ರೊ. ಜಿ.ಬಿ. ಹಳ್ಯಾಳ ನಿರೂಪಿಸಿದರು. ಪ್ರೊ. ಎಸ್.ಸಿ. ಇಂಡಿ, ಲಕ್ಷ್ಮಿಕಾಂತ ಪಾಟೀಲ, ರಾಜು ಅಣೆಪ್ಪನವರ, ಬಸವ ಪರಿಸರ ಸಂರಕ್ಷಣೆ ಸಮಿತಿಯ ಕಾರ್ಯದರ್ಶಿ ಸುರೇಶ ಹೊರಕೇರಿ, ಬಿ.ಎಲ್. ಲಿಂಗಶೆಟ್ಟರ, ಗುರುರಾಜ ಜಾಡಗೌಡ್ರ, ಸುರೇಶ ಪರಮಶೆಟ್ಟಿ, ವಿ.ವಿ. ಶೀರಿ, ಸುನೀಲ ಬ್ಯಾಹಟ್ಟಿ, ಲೋಕೇಶ ಕೊರವಿ, ಎಸ್.ವಿ. ಕೊಟಗಿ, ಶಿವಶಂಕರಪ್ಪ ಮೂಗಬಸ್ತ, ಹನುಮಂತಪ್ಪ ಮಂಟೂರ, ಪ್ರೊ. ವಿ.ಬಿ. ಮಾಗನೂರ, ಕೆ.ಎಸ್. ಇನಾಮತಿ, ಅನಸೂಯಾ ಅರಕೇರಿ, ಬಿ.ವಿ. ಹೊಸಕೇರಿ, ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net