

ಮೈಸೂರು: ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ಆವಿಷ್ಕಾರಗಳು ರೇಷ್ಮೆ ಕೃಷಿಯ ಉತ್ಪಾದಕತೆ, ಲಾಭದಾಯಕತೆ, ಸುಸ್ಥಿರತೆ ಸುಧಾರಿಸಲು ಬಹಳ ಉಪಯುಕ್ತವಾಗಿವೆ ಎಂದು ಸಂಸ್ಥೆಯ ನಿರ್ದೇಶಕಿ ಡಾ.ಪಿ.ದೀಪಾ ಹೇಳಿದರು.
ಕೇಂದ್ರ ರೇಷ್ಮೆ ಮಂಡಳಿ, ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದೊಂದಿಗೆ ನಗರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ವಿದೇಶಿಗರಿಗಾಗಿ ರೇಷ್ಮೆ ಹಾಗೂ ರೇಷ್ಮೆ ಉದ್ಯಮಕ್ಕೆ ಸಂಬಂಧಿಸಿದಂತೆ ಬುಧವಾರದಿಂದ ಒಂದು ತಿಂಗಳ ಕಾಲ ಆಯೋಜಿಸಿರುವ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಶೀತೊಷ್ಣ ಪ್ರದೇಶದಲ್ಲಿ ರೇಷ್ಮೆ ಕೃಷಿ ಅಭಿವೃದ್ಧಿ ಹೇಗೆ ಮಾಡಬಹುದು ಎನ್ನುವ ಸಂಶೋಧನೆ ಕುರಿತು ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಬಹಳ ಮುಖ್ಯವಾದ ಪಾತ್ರ ವಹಿಸಿದೆ. ಈ ಸಂಸ್ಥೆಯು ವಿವಿಧ ರೀತಿಯ ರೇಷ್ಮೆ ಕೃಷಿಗೆ ಸಂಬಂಧಿಸಿದ ತಂತ್ರಜ್ಞಾನ ಮತ್ತು ಉತ್ಪನ್ನಗಳನ್ನು ಆವಿಷ್ಕಾರ ಮಾಡಿ ಹಲವಾರು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ರೇಷ್ಮೆ ಕೃಷಿಯ ತಾಂತ್ರಿಕ ಬೆಂಬಲವನ್ನು ಸಹ ಒದಗಿಸುತ್ತಿದೆ. ಇಂತಹ ರೇಷ್ಮೆ ಕೃಷಿಯ ತಂತ್ರಜ್ಞಾನಗಳನ್ನು ಕಲಿತು ತಮ್ಮ ದೇಶದಲ್ಲಿ ಉಪಯೋಗಿಸಬೇಕು ಎಂದರು.
ಈ ತರಬೇತಿಯಲ್ಲಿ ರೇಷ್ಮೆ ಕೃಷಿಗೆ ಸಂಬಧಿಸಿದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಹೊಸ ಕೌಶಲಗಳು ಮತ್ತು ತಾಂತ್ರಿಕತೆಗಳ ಬಗ್ಗೆ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು. ರೇಷ್ಮೆ ಕೃಷಿ ಪ್ರಗತಿಪರ ರೈತರನ್ನು ಹಾಗೂ ರೇಷ್ಮೆ ಕೃಷಿಗೆ ಸಂಬಟಧಿಸಿದ ಘಟಕಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಹೇಳಿದರು.
ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕ (ತಾಂತ್ರಿಕ) ಡಾ.ಎಸ್.ಮಂಥಿರಾ ಮೂರ್ತಿ ಮಾತನಾಡಿ, ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಮೈಸೂರು ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ಹಲವು ತಾಂತ್ರಿಕತೆಗಳನ್ನು ಅವಿಷ್ಕಾರಿಸಿದೆ. ಈ ತರಬೇತಿ ಶಿಬಿರದಲ್ಲಿ ತಾಂತ್ರಿಕತೆಗಳನ್ನು ವಿಜ್ಞಾನಿಗಳು ತರಬೇತಿ ಅವಧಿಯಲ್ಲಿ ಪ್ರಾಯೋಗಿಕವಾಗಿ ವಿವರಿಸುತ್ತಾರೆ. ಅದನ್ನು ತಾವು ಅರಿತು ತಮ್ಮ ದೇಶಗಳಿಗೆ ಹೋದ ಮೇಲೆ ರೇಷ್ಮೆ ಕೃಷಿಯಲ್ಲಿ ಆಳವಡಿಸಿಕೊಳ್ಳಬೇಕು ಎಂದರು.
2014 ರಿಂದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಮೈಸೂರಿನಲ್ಲಿ 7ನೇ ತಂಡದ ಅಂತಾರಾಷ್ಟ್ರೀಯ ಅಭ್ಯರ್ಥಿಗಳಿಗೆ ತರಬೇತಿ ಕಾರ್ಯಕ್ರಮವಾಗಿದೆ. ಇಲ್ಲಿಯವರೆಗೆ 22 ದೇಶಗಳಿಂದ 132 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ಈಜಿಪ್ಟ್, ಇಥಿಯೋಪಿಯಾ, ಘಾನಾ, ಫಿಲಿಪೈನ್ಸ್, ಕ್ಯೂಬಾ, ಟಾಂಜಾನಿಯಾ, ಉಗಾಂಡಾ, ಥೈಲ್ಯಾಂಡ್ ಈ 8 ದೇಶಗಳ 30 ಜನರಿಗೆ ಸೆ.30ರ ವರೆಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರು ಐಎಸ್‌ಸಿ ಸಹಾಯಕ ಕಾರ್ಯದರ್ಶಿ ಪದ್ಮನಾಭ ನಾಯಕ್ ಅವರು, ರೇಷ್ಮೆ ಮತ್ತು ರೇಷ್ಮೆ ಉದ್ಯಮಕ್ಕೆ ಸಂಬಂದಿಸಿದ ಅಂತಾರಾಷ್ಟ್ರೀಯ ತರಬೇತಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಿದರು.
ತರಬೇತಿ ವಿಭಾಗದ ಡೀನ್ ಡಾ. ಕೆ.ಎನ್.ಮಧುಸೂದನ್, ಸಂಸ್ಥೆಯ ವಿಜ್ಞಾನಿಗಳಾದ ಡಾ.ಎಲ್.ಕುಸುಮಾ, ಡಾ.ಎಂ.ಎಸ್.ರಂಜನಿ, ಯೋಜನಾ ಸಹಾಯಕರು, ಸಿಬ್ಬಂದಿ ಇತರರು ಇದ್ದರು.