

ಬಾದಾಮಿ: ವಿಜ್ಞಾನ ಆವಿಷ್ಕಾರಗಳು ಜಗತ್ತಿಗೆ ಬೆಳಕಾಗುವ ನಿಟ್ಟಿನಲ್ಲಿ ಯುವ ವಿಜ್ಞಾನಿಗಳನ್ನು ಸೃಷ್ಟಿಸುವ ಕಾರ್ಯದಲ್ಲಿ ವಿಜ್ಞಾನ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಬಿಇಒ ಕಚೇರಿಯ ಶಿಕ್ಷಣ ಸಂಯೋಜಕ ಬಿ.ಟಿ. ಹಳ್ಳಿ ಹೇಳಿದರು.
ತಾಲೂಕಿನ ಮಮಟಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸ್ಥಳೀಯ ಉದಾಹರಣೆಯೊಂದಿಗೆ ಬೋಧಿಸುವುದು ಅನಿವಾರ್ಯವಾಗಿದೆ ಎಂದರು.
ಕಲ್ಲಾಪೂರ ಎಸ್.ಕೆ.ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಸಂತೋಷ ಪಟ್ಟಣಶೆಟ್ಟಿ ಮಾತನಾಡಿ, ಮಕ್ಕಳ ಕ್ರಿಯಾಶೀಲತೆಗೆ ವಿಜ್ಞಾನದ ಮಾದರಿಗಳು ಬಲ ತುಂಬಲಿವೆ. ವಿಜ್ಞಾನವು ಪ್ರಾಯೋಗಿಕವಾದ ನಿಖರವಾದ ಸತ್ಯವನ್ನೇ ತಿಳಿಸುತ್ತದೆ ಎಂದರು.
ನೀಲಗುಂದ ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಎಚ್.ಮುಲ್ಲಾ ಮಾತನಾಡಿ, ಮಕ್ಕಳ ಶ್ರೇಯೋಭಿವೃದ್ಧಿಯನ್ನು ಹೆಚ್ಚು ಮಾಡಲು ವೈಜ್ಞಾನಿಕ ವಸ್ತು ಪ್ರದರ್ಶನ ಬಹಳಷ್ಟು ಉಪಯೋಗಕಾರಿಯಾಗಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಮಾರುತಿ ಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಪದ್ಮಾವತಿ ರಾಮಣ್ಣ ಡೊಳ್ಳಿನ, ಎಸ್‌ಡಿಎಂಸಿ ಸದಸ್ಯರಾದ ತಿಪ್ಪಣ್ಣ ಅಣ್ಣಿಗೇರಿ, ರಾಧಾ ಕುಳಗೇರಿ, ಶಿಕ್ಷಕರಾದ ಎಂ.ಕೆ. ಚಿಕ್ಕೊಪ್ಪ, ಆರ್.ಸಿ. ಕುದರಿ, ವಿ.ಆರ್. ಅರಹುಣಶಿ, ವಿಜಯಲಕ್ಷ್ಮೀ ಪೂಜಾರ, ಕೆ.ಎಲ್. ರೊಳ್ಳಿ ಮತ್ತಿತರರಿದ್ದರು. ಶಾಲೆಯ ಮುಖ್ಯಶಿಕ್ಷಕ ಎಸ್.ಎಸ್. ಕರಡಿಗುಡ್ಡ ಸ್ವಾಗತಿಸಿದರು. ಎ.ಟಿ. ಛಬ್ಬಿ ನಿರೂಪಿಸಿದರು. ಎಸ್.ಡಿ. ಹೊಸಮನಿ ವಂದಿಸಿದರು.