

ಸತೀಶ ಬಿ. ಕುರುಗೋಡು
ಬೇಸಿಗೆ ಆರಂಭವಾಗಿದ್ದು, ಮುಂಬರುವ ದಿನಗಳಲ್ಲಿ ಬಿಸಿಲಿನ ಕಾವು ಮತ್ತಷ್ಟು ಹೆಚ್ಚಲಿದೆ. ಇದರ ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆಯೂ ಉಲ್ಬಣಗೊಳ್ಳಲಿದೆ. ಪ್ರಾರಂಭದಲ್ಲೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ, ನೀರಿನ ಬವಣೆ ಜನರನ್ನು ಘಾಸಿಗೊಳಿಸಲಿದೆ.
ತಾಲೂಕು ವ್ಯಾಪ್ತಿಯಲ್ಲಿ ತುಂಗಭದ್ರಾ ಕಾಲುವೆ ಹಾದು ಹೋಗಿದ್ದರೂ ಕೆಲ ಗ್ರಾಮಗಳ ಕೆರೆಗಳನ್ನು ಭರ್ತಿ ಮಾಡಿಲ್ಲ. ಇದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸ್ಪಷ್ಟ ಸೂಚನೆ ಇದೆ. ಕಳೆದ ವರ್ಷ ಮುಂಗಾರು ಮಳೆ ಉತ್ತಮವಾಗಿತ್ತು. ಇದರ ಪರಿಣಾಮ ಹಳ್ಳ, ಕೊಳ್ಳಗಳು, ಕೊಳವೆ ಬಾವಿಗಳು, ತೆರೆದ ಬಾವಿಗಳು ತುಂಬಿಕೊಂಡಿದ್ದವು. ಈ ಕಾರಣ ತಕ್ಕ ಮಟ್ಟಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿತ್ತು. ಈ ಬಾರಿ ಮಳೆ ಅಷ್ಟಕ್ಕಷ್ಟೆ ಆಗಿದ್ದರಿಂದ ಕಳೆದ ಬಾರಿಗಿಂತ ಈ ಬಾರಿ ಸಮಸ್ಯೆ ಹೆಚ್ಚಾಗಲಿದೆ ಎನ್ನುವುದು ತಾಲೂಕಿನ ಮುಷ್ಟಗಟ್ಟೆ, ಎಚ್.ವೀರಾಪುರ, ಚನ್ನಪಟ್ಟಣ, ಚಿಟಗಿನಾಳ್, ಸೋಮಲಾಪುರ, ಯರ‌್ರಂಗಳಿ, ಸೋಮಸಮುದ್ರ, ಸಿದ್ದಮ್ಮನಹಳ್ಳಿ ಮತ್ತಿತರ ಗ್ರಾಮಗಳ ಜನರ ಆತಂಕ.
ಪಟ್ಟಣದ ಜನರು ಸಮೀಪದಲ್ಲಿರುವ ರೈತರ ಜಮೀನುಗಳಲ್ಲಿರುವ ಪಂಪ್‌ಸೆಟ್‌ಗಳಿಗೆ ತೆರಳಿ ನೀರು ತರಬೇಕಾದ ಅನಿವಾರ್ಯತೆ ಉಂಟಾಗಿದೆ. ಅದೇ ರೀತಿ ಎಚ್.ವೀರಾಪುರ, ಮುಷ್ಟಗಟ್ಟೆ ಕ್ಯಾದಿಗೆಹಾಳ್, ಅರ್ಜುನರಾಜ್‌ಕ್ಯಾಂಪ್, ಯಲ್ಲಾಪುರ, ವದ್ದಟ್ಟಿ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತುಂಬ ಎದ್ದು ಕಾಣುತ್ತಿದೆ. ಬೇಸಿಗೆ ಪ್ರಾರಂಭದಲ್ಲಿ ನೀರಿನ ಸಮಸ್ಯೆ ಕಾಣುತ್ತಿದ್ದು, ಮಧ್ಯದ ಅವಧಿಯಲ್ಲಿ ಸಮಸ್ಯೆಗಳು ಮತ್ತಷ್ಟು ಹೆಚ್ಚಲಿದೆ. ಇದನ್ನು ಎದುರಿಸಲು ಸ್ಥಳೀಯ ಆಡಳಿತ ಸಜ್ಜಾಗುತ್ತದೆಯೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಕೇಂದ್ರ ಸರ್ಕಾರ ಜೆಜೆಎಂ ಕುಡಿವ ನೀರಿನ ಯೋಜನೆ 6 ತಿಂಗಳಿಗೆ ಪೂರ್ಣಗೊಳ್ಳಬೇಕು. ಆದರೆ, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ.
ಕೆಲವುಕಡೆ ಫ್ಲೋರೈಡ್‌ಯುಕ್ತ ನೀರು
ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ವಿವಿಧ ಹಳ್ಳಿಗಳಲ್ಲಿ ಕುಡಿಯುವ ನೀರಿನ ಆರ್‌ಒ ಘಟಕಗಳನ್ನು ನಿರ್ಮಾಣ ಮಾಡಿದೆ. ಇದರ ನಿರ್ವಹಣೆಗೆ ಬೇಕಾಗುವ ವೆಚ್ಚ ಸರಿದೂಗಿಸಲು ಪ್ರತಿ 20 ಲೀಟರ್ ಕ್ಯಾನ್‌ಗೆ 5 ರಿಂದ 10 ರೂ. ನಿಗದಿಪಡಿಸಲಾಗಿದೆ. ಆದರೆ, ಕೆಲ ಬಡ ಕುಟುಂಬಗಳು ಹಣ ಕೊಟ್ಟು ಕುಡಿಯುವ ನೀರು ಖರೀದಿಸಲು ಇಚ್ಛಿಸುವುದಿಲ್ಲ. ಬದಲಿಗೆ ಖಾಸಗಿ ಬೋರ್‌ವೆಲ್‌ಗಳ ನೀರು ಕುಡಿಯುತ್ತಿದ್ದಾರೆ. ಬೋರ್‌ವೆಲ್ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿರುವ ಕಾರಣ, ಈ ನೀರನ್ನು ಅವರು ನೇರವಾಗಿ ಕುಡಿಯುವ ಕಾರಣ ಅವರ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗಿ ಕೈ-ಕಾಲು ನೋವು, ಮಂಡಿ ನೋವು, ಕೀಲು ನೋವು, ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುವುದು, ಹಲ್ಲುಗಳು ಪಾಚಿ ಕಟ್ಟಿ ಬೀಳುವುದು ಮೊದಲಾದ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದಾರೆ.
20 ಲೀಟರ್‌ಗೆ ರೂ. 7
ಕುಡಿವ ನೀರು ಮಾರಾಟ ಮಾಡಲು ಖಾಸಗಿ ವಾಹನಗಳು ಮನೆಯ ಬಾಗಿಲುಗಳಿಗೆ ಬರುವುದು ಶುರುವಾಗಿದೆ. ಹೆಚ್ಚಿಗೆ ಹಣ ಕೊಟ್ಟು ಈ ನೀರನ್ನು ಕೊಳ್ಳಬೇಕು. ಹಣ ಇದ್ದವರು ಸ್ವಂತ ಖರ್ಚಿನಲ್ಲಿ ಆರ್‌ಒ ಪ್ಲಾಂಟ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ತಕ್ಕ ಮಟ್ಟಿಗೆ ಹಣ ಇದ್ದವರು 20 ಲೀಟರ್ ನೀರನ್ನು 7ರೂ. ರಂತೆ ಖರೀದಿಸುತ್ತಾರೆ. ಇಷ್ಟೂ ಹಣ ಇಲ್ಲದ ಬಡವರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಸಂಸ್ಕರಣೆ ಮಾಡದೆ ಸರಬರಾಜು
ಕುರುಗೋಡು ಪಟ್ಟಣದಲ್ಲಿ ಒಟ್ಟು 23 ವಾರ್ಡ್‌ಗಳಿವೆ ಇದರಲ್ಲಿ ಪುರಸಭೆ ಕಚೇರಿಗೆ ಒಳಪಟ್ಟಿರುವ 12 ಮತ್ತು ಖಾಸಗಿಯಾಗಿ 5 ಆರ್‌ಒ ಘಟಕಗಳಿವೆ. ಪಟ್ಟಣಕ್ಕೆ ನೀರು ಪೂರೈಕೆಗೆ ಪ್ರತ್ಯೇಕ ಕುಡಿವ ನೀರಿನ ಕೆರೆ ಇದ್ದರೂ ನೀರು ಸಂಸ್ಕರಣೆ ಮಾಡದೇ ನಳಗಳಿಗೆ ನೇರವಾಗಿ ಸರಬರಾಜು ಮಾಡಲಾಗುತ್ತಿದೆ. ಜನರಿಗೆ ಕಲುಷಿತ ನೀರೇ ಗತಿಯಾಗಿದೆ. ನಳಗಳಿಗೆ ಪ್ರತಿ ದಿನ ನೀರು ಪೂರೈಕೆ ಮಾಡದೇ ಎರಡು ದಿನಕ್ಕೊಮ್ಮೆ ಮಾತ್ರ ನೀರು ಬಿಡುತ್ತಾರೆ. ಜನರು ನೀರು ಹಿಡಿಯಲು ತಮ್ಮ ನಿತ್ಯದ ಕೆಲಸಗಳನ್ನು ಬದಿಗೊತ್ತುವ ಅನಿವಾರ್ಯತೆ ಇದೆ. ಇದು ಬಿಟ್ಟರೆ ಜನರಿಗೆ ಬೇರೆ ದಾರಿ ಇಲ್ಲ.
ಸಮಸ್ಯೆಯಾಗದು ಅಂತಾರೆ ಅಧಿಕಾರಿಗಳು
ಕುರುಗೋಡು ತಾಲೂಕಿನಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ತಾಲೂಕು ವ್ಯಾಪ್ತಿಯಲ್ಲಿ 9 ಕುಡಿಯುವ ನೀರಿನ ಕೆರಗಳನ್ನು ನಿರ್ಮಾಣ ಮಾಡಲಾಗಿದೆ. ತಾಲೂಕು ವ್ಯಾಪ್ತಿಯಲ್ಲಿ ಹಾದು ಹೋಗುವ ತುಂಗಭದ್ರಾ ಕೆಳ ಮಟ್ಟದ ಕಾಲುವೆ ಹಾಗೂ ಮೇಲ್ಮಟ್ಟದ ಕಾಲುವೆಗಳಿಂದ ಈ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಪ್ರಸಕ್ತ ವರ್ಷ ಏಪ್ರಿಲ್ ಮಧ್ಯದವರೆಗೂ ಕಾಲುವೆಗಳಲ್ಲಿ ನೀರು ಹರಿಯಲಿದೆ. ಇದರಿಂದ ಮುಂದಿನ ಮೂರು ತಿಂಗಳವರೆಗೂ ಯಾವುದೇ ಸಮಸ್ಯೆ ಇರುವುದಿಲ್ಲ ಎನ್ನುವುದು ಅಧಿಕಾರಿ ವರ್ಗದವರ ಅಂಬೋಣ.
ಕುರುಗೋಡು ಪಟ್ಟಣದಲ್ಲಿ ಕುಡಿವ ನೀರು ಎಲ್ಲ ವಾರ್ಡ್‌ಗಳಲ್ಲಿ ಸಿಗುವಂತೆ ಕ್ರಮ ಗೈಗೊಳ್ಳಲಾಗಿದೆ. ಬೋರ್‌ವೆಲ್, ಕುಡಿವ ನೀರಿನ ಕೆರೆಯಿಂದ ನೀರಿನ ಸರಬರಾಜು ಆಗುತ್ತಿದೆ. ಒಂದು ವೇಳೆ ದುರಸ್ತಿಗೆ ಬಂದರೆ ತಕ್ಷಣವೇ ಸರಿಪಡಿಸಲು 5 ಲಕ್ಷ ರೂ. ಕಾಯ್ದಿರಿಸಲಾಗಿದೆ. ಕೆರೆಯ ನೀರನ್ನು ಬ್ಲೀಚಿಂಗ್ ಪೌಡರ್ ಹಾಕಿ, ಶುದ್ಧೀಕರಿಸಿ ಬಿಡಲಾಗುತ್ತಿದೆ. ಅದಾಗ್ಯೂ ಸಣ್ಣ-ಪುಟ್ಟ ನ್ಯೂನತೆಗಳು ಕಂಡು ಬಂದಲ್ಲಿ ಸರಿಪಡಿಸಲಾಗುವುದು.ಎಂ.ವಿಜಯಲಕ್ಷ್ಮೀಮುಖ್ಯಾಧಿಕಾರಿ, ಪುರುಸಭೆ ಕುರುಗೋಡು ಕುರುಗೋಡು ಪಟ್ಟಣಕ್ಕೆ ಕುಡಿವ ನೀರಿನ ಕೆರೆ, ಬಸವಪುರ ಕಾಲುವೆಯಿಂದ ಪಂಚಮುಖಿ ದೇವಸ್ಥಾನ ಬಳಿಯ ನೀರಿನ ಟ್ಯಾಂಕ್‌ಗೆ ಸಂಗ್ರಹಿಸಿ ಬಿಡುತ್ತಾರೆ. ಆದರೆ, ಕೆಳಮಟ್ಟದ ಕಾಲುವೆಯ ಹರಿವು ನಿಂತರೆ, ಸಮಸ್ಯೆ ಎದುರಾಗಲಿದೆ. ಎಲ್ಲ ವಾರ್ಡ್‌ಗಳಿಗೂ ಸರ್ಮಪಕ ನೀರು ಸರಬರಾಜಿಲ್ಲ. ಕೆರೆಯ ನೀರು ಕೆಲವು ವಾರ್ಡ್‌ಗಳಿಗೆ, ಕಾಲುವೆ ನೀರು ಕೆಲವು ವಾರ್ಡ್‌ಗಳಿಗೆ ಸರಬರಾಜು ಆಗುತ್ತದೆ. ಒಂದೇ ಕಡೆಯಿಂದ ಎಲ್ಲ ವಾರ್ಡ್‌ಗಳಿಗೆ ಬೈಫರ್ಕೇಷನ್‌ಗೆ ನಕಾಶೆ ರೂಪಿಸಿ ನೀರು ಬಿಡುವಂತೆ ಮಾಡಿದರೆ ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬಹುದು.ಡಿಶ್ ರಾಜುಪುರಸಭೆಯ 6ನೇ ವಾರ್ಡ್ ಸದಸ್ಯ 21ನೇ ವಾರ್ಡ್‌ಗೂ 2-3 ದಿನಕ್ಕೊಮ್ಮೆ ನಲ್ಲಿ ನೀರು ಬರುತ್ತವೆ. ಅದು ಕೂಡ ಕಲುಷಿತವಾಗಿರುತ್ತದೆ. ಕುಡಿಯಲು ಯೋಗ್ಯವಾಗಿಲ್ಲದ ನೀರನ್ನು ಬಿಡುವ ಮುನ್ನ ಫಿಲ್ಟರ್ ಮಾಡಿ ಬಿಡಬೇಕು.ಎಂ.ಶರಣಬಸವರಾಜಕುರುಗೋಡು ನಿವಾಸಿ