ಅಂಡರ್​ಪಾಸ್​ಗೆ ಅರ್ಥಗರ್ಭಿತ ಅಂದಚೆಂದ!

h30-Colour My City 1
Published on

ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆ ನಗರ-ಭವಾನಿ ನಗರ ಮಧ್ಯೆ ಶ್ರೀ ಕೃಷ್ಣ ಕಲ್ಯಾಣ ಮಂಟಪ ಬಳಿ ನಿರ್ವಣವಾಗಿರುವ ನೂತನ ರೈಲ್ವೆ ಕೆಳಸೇತುವೆ (ಅಂಡರ್​ಪಾಸ್) ಮೂಲಕ ಹೋಗುವವರು ಒಂದು ಕ್ಷಣ ನಿಧಾನಿಸಿ ಆಚೆ ಈಚೆಯ ಗೋಡೆ ನೋಡಿಯೇ ತೆರಳುತ್ತಾರೆ. ಏಕೆಂದರೆ, ಸ್ವಚ್ಛ ಗೋಡೆಯ ಮೇಲಿನ ಸುಂದರ, ಅರ್ಥಗರ್ಭಿತ ದೊಡ್ಡ ದೊಡ್ಡ ಚಿತ್ರಗಳು ಅವಸರದಲ್ಲಿರುವವರ ಗಮನವನ್ನೂ ಸೆಳೆಯುವಂತಿವೆ!

ಈ ಚಿತ್ರಗಳನ್ನು ‘ಕಲರ್ ಮೈ ಸಿಟಿ’ ಅಭಿಯಾನದ ರೂವಾರಿ ಕಿರಣ ಉಪ್ಪಾರ ನೇತೃತ್ವದ ತಂಡದ ಸದಸ್ಯರು ರಚಿಸಿದ್ದಾರೆ.

ಸ್ವಚ್ಛ ಭಾರತ, ಕರೊನಾ ಸೇನಾನಿಗಳಿಗೆ ಸಲಾಂ, ಕಡ್ಡಾಯವಾಗಿ ಮಾಸ್ಕ್ ಧರಿಸಿ, ಕರೊನಾ ಲಸಿಕಾಕರಣ, ಬೇಟಿ ಬಚಾವೊ ಬೇಟಿ ಪಢಾವೊ, ಮನೆ ಮನೆಯಿಂದ ಕಸ ಸಂಗ್ರಹ ಸೇರಿ ವಿವಿಧ ಘೊಷಣೆಗಳ ಕುರಿತು ಜಾಗೃತಿ ಮೂಡಿಸುವ, ನಾಡಿನ ಹೆಮ್ಮೆಯ ಹಂಪಿ ಕಲ್ಲಿನ ರಥದ ಚಿತ್ರಗಳನ್ನು ಸುಂದರವಾಗಿ ಬಿಡಿಸಲಾಗಿದೆ.

‘ನಮ್ಮ ಉದ್ದೇಶ ತಿಳಿಸಿದಾಗ, ಈ ರೈಲ್ವೆ ಕೆಳಸೇತುವೆ ನಿರ್ಮಾಣ ಕಾರ್ಯ ವಹಿಸಿಕೊಂಡಿದ್ದ ಸ್ವರ್ಣ ಕನ್​ಸ್ಟ್ರಕ್ಷನ್ ಕಂಪನಿಯ ಡಾ. ವಿ.ಎಸ್.ವಿ. ಪ್ರಸಾದ ಅವರು ನಮಗೆ ಪೂರ್ಣ ಸಹಕಾರ ನೀಡಿದರು. ಎಷ್ಟು ಚಿತ್ರಗಳನ್ನಾದರೂ ಬಿಡಿಸಿರಿ, ಪೇಂಟ್ ಖರ್ಚು ನಮ್ಮದು’ ಎಂದರು. ಹಾಗೆಯೇ, ಕೋವಿಡ್ ಜಾಗೃತಿ ಕುರಿತ ಚಿತ್ರಗಳ ರಚನೆಗೆ ಕಿಮ್್ಸ ಪ್ರಾಧ್ಯಾಪಕ ಡಾ. ಸಚಿನ್ ಹೊಸಕಟ್ಟಿ ಅವರು ಮಾರ್ಗದರ್ಶನ ಮಾಡಿ ಸಹಕರಿಸಿದರು. ಉಜ್ವಲ ನರಗುಂದ, ನಸೀಮ, ನವೀನ ಎಚ್., ಸಾಗರ, ನದೀಮ, ನಾಗರಾಜ, ರಾಕೇಶ, ಕಿರಣ ಸುಂಕದ, ಅಭಿಷೇಕ ಕೌಜಲಗಿ, ಸಂತೋಷ ಹಾವನೂರ, ಇತರರು ಚಿತ್ರ ರಚನೆಯಲ್ಲಿ ನೆರವಾದರು. ಅವರಿಗೆಲ್ಲ ಕೃತಜ್ಞನಾಗಿದ್ದೇನೆ ಎಂದು ಕಿರಣ ಉಪ್ಪಾರ ಹೇಳುತ್ತಾರೆ.

ಸಮಾನ ಮನಸ್ಕರ ಯತ್ನ

ಕಿರಣ ಉಪ್ಪಾರ ಮತ್ತು ಸಮಾನ ಮನಸ್ಕರು ಸೇರಿ ಅಂದಾಜು 5 ವರ್ಷದ ಹಿಂದೆ ಆರಂಭಿಸಿದ ‘ಕಲರ್ ಮೈ ಸಿಟಿ’ ಅಭಿಯಾನವು ಸ್ವಚ್ಛತಾ ಕಾರ್ಯ ಮತ್ತು ಸೌಂದಯೀಕರಣದಿಂದ ಈಗಾಗಲೇ ಜನಪ್ರಿಯವಾಗಿದೆ. ಹು-ಧಾ ಅವಳಿ ನಗರದ ಗೋಡೆಗಳ ಮೇಲೆ ಸಾವಿರಾರು ಚಿತ್ರಗಳನ್ನು ಬಿಡಿಸಲಾಗಿದೆ.

ಪೋಸ್ಟರ್​ ಅಂಟಿಸಬೇಡಿ, ಉಗಿಯಬೇಡಿ

ಕಲಾವಿದರು ಪರಿಶ್ರಮ ಪಟ್ಟು ಸುಂದರ ಚಿತ್ರ ಬಿಡಿಸುತ್ತಾರೆ. ಅದರ ಮೇಲೆಯೇ ಯಾರೋ ಪೋಸ್ಟರ್ ಅಂಟಿಸಿ, ಅಂದ ಮತ್ತು ಉದ್ದೇಶವನ್ನು ಕೆಡಿಸುತ್ತಾರೆ. ಇದು ಅತ್ಯಂತ ನೋವು ಉಂಟು ಮಾಡುತ್ತದೆ. ಆದ್ದರಿಂದ, ಮಹಾನಗರ ಪಾಲಿಕೆಯವರು ಪೋಸ್ಟರ್ ಅಂಟಿಸುವವರಿಗೆ ಪ್ರತ್ಯೇಕ ಜಾಗ ಮಾಡಿಕೊಡಲಿ ಎನ್ನುವುದು ಕಿರಣ ಉಪ್ಪಾರ ಅವರ ವಿನಂತಿ. ಚಿತ್ರಗಳ ಮೇಲೆ ಉಗಿಯುವುದು ಮಹಾಪಾಪದ ಕೆಲಸ ಎಂದು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು ಎಂದೂ ಅವರು ಹೇಳುತ್ತಾರೆ.

ಕಲರ್ ಮೈ ಸಿಟಿ ಅಭಿಯಾನಕ್ಕೆ ಹಿಂದೆಯೂ ನೆರವು ನೀಡಿದ್ದೇನೆ. ಈಗ ನಾನೇ ನಿರ್ವಿುಸಿದ ಸೇತುವೆಯಾದ್ದರಿಂದ ಹೆಚ್ಚು ಅಭಿಮಾನದಿಂದ ಸಹಕಾರ ಕೊಟ್ಟಿದ್ದೇನೆ. ಅಭಿಯಾನಕ್ಕೆ ಮುಂದೆಯೂ ನನ್ನ ಬೆಂಬಲ ಇರುತ್ತದೆ.| ಡಾ. ವಿ.ಎಸ್.ವಿ. ಪ್ರಸಾದಸ್ವರ್ಣ ಸಮೂಹ ಸಂಸ್ಥೆಗಳ ಚೇರ್ಮನ್

ಹು-ಧಾ ಅವಳಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಜಾರಿಯಾಗುತ್ತಿದೆ. ನಮ್ಮ ನಗರ ಸ್ವಚ್ಛತೆ ಮತ್ತು ಸೌಂದರ್ಯದ ಮೂಲಕ ಗಮನ ಸೆಳೆಯಬೇಕು ಎಂಬುದು ನಮ್ಮ ಉದ್ದೇಶ. ದಾನಿಗಳ ನೆರವಿನಿಂದ ಕಲರ್ ಮೈ ಸಿಟಿ ಅಭಿಯಾನ ಮುನ್ನಡೆಸುತ್ತಿದ್ದೇವೆ. ಸಾರ್ವಜನಿಕರ ಸಹಕಾರವನ್ನೂ ಬಯಸುತ್ತೇವೆ.| ಕಿರಣ ಉಪ್ಪಾರಕಲರ್ ಮೈ ಸಿಟಿ ಅಭಿಯಾನದ ರೂವಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net