ದೇಶಕ್ಕೆ ನಮ್ಮ ಕೊಡುಗೆ ಏನೆಂದು ಆತ್ಮಾವಲೋಕನ ಮಾಡಿಕೊಳ್ಳಿ

15ark1
Published on


ಅರಕಲಗೂಡು : ದೇಶದಲ್ಲಿ ಹೆಚ್ಚುತ್ತಿರುವ ಅನ್ಯಾಯ, ಮೋಸ, ಲೂಟಿ, ಅಕ್ರಮ, ಭ್ರಷ್ಟಾಚಾರ ವ್ಯವಸ್ಥೆಯನ್ನು ಹತ್ತಿಕ್ಕಿ ಸಮಾಜವನ್ನು ಸರಿದಾರಿಗೆ ತರದಿದ್ದರೆ ಮುಂದೆ ಕೆಟ್ಟ ದಿನಗಳು ಕಾದಿವೆ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಕಳವಳ ವ್ಯಕ್ತಪಡಿಸಿದರು.


ತಾಲೂಕಿನ ಸುಕ್ಷೇತ್ರ ಅರಸೀಕಟ್ಟೆ ಅಮ್ಮ ದೇವಸ್ಥಾನ ಸಭಾಂಗಣದಲ್ಲಿ ಶ್ರೀ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿಯಿಂದ ಗುರುವಾರ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಮಹನೀಯರು ತ್ಯಾಗ, ಬಲಿದಾನ ಮಾಡಿದ್ದಾರೆ. ಆದರೆ ನಾವು ದೇಶಕ್ಕೆ ಕೊಟ್ಟ ಕೊಡುಗೆ ಏನು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಅನ್ಯಾಯ ಅನೀತಿ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದರು.


ಕೆಎಸ್‌ಒಯು ನಿವೃತ್ತ ಪ್ರಾಧ್ಯಾಪಕ ಎ.ರಾಮಸ್ವಾಮಿ, ನಿವೃತ್ತ ಪ್ರಾಂಶುಪಾಲ ಪ್ರಭುಶಂಕರ್, ನಿವೃತ್ತ ಉಪನ್ಯಾಸಕರಾದ ಬಿ.ಇ. ಯೋಗೇಂದ್ರ, ಹಿರೇಹಳ್ಳಿ ಈರೇಶ್, ಸೈಯ್ಯದ್ ಸಝದ್ ಪಾಷಾ ಮಾತನಾಡಿದರು.


ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಹಿಂದಲಹಳ್ಳಿ ಸುಮಾ, ಅಂಗವಿಕಲ ಕ್ರೀಡಾಪಟು ಕೆರೆಕೋಡಿ ನಂದಿತಾ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಅಪೂರ್ವಾ, ಉದ್ಯಮಿ ಲಕ್ಕೂರು ಜಯರಾಮ್, ಯುವ ಪ್ರಗತಿಪರ ಕೃಷಿಕ ಚಿಕ್ಕಬೊಮ್ಮನಹಳ್ಳಿ ನವೀನ್ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಪ್ರಾಂಶುಪಾಲ ಬಸವರಾಜು, ಸಮಿತಿ ಕಾರ್ಯದರ್ಶಿ ಕೃಷ್ಣೇಗೌಡ, ಖಜಾಂಚಿ ಸಿದ್ದರಾಮೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net