ತಂತ್ರಜ್ಞಾನಕ್ಕೆ ತಕ್ಕಂತೆ ಬೌದ್ಧಿಕ ಸಾಮರ್ಥ್ಯವಿರಲಿ: ಹಿರಿಯ ವಾಣಿಜ್ಯೋದ್ಯಮಿ ಡಾ.ಸಮರ್ಥಂ ನಾಗಭೂಷಣಂ ಕಿವಿಮಾತು

Introductory program at PES College of Engineering
Published on

ಮಂಡ್ಯ: ನಾಗಲೋಟದ ಬೆಳವಣಿಗೆಯಲ್ಲಿರುವ ತಂತ್ರಜ್ಞಾನಕ್ಕೆ ತಕ್ಕಂತೆ ನಮ್ಮ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಅದಕ್ಕಾಗಿ ದೇಹಾರೋಗ್ಯವನ್ನು ಸಮತೋಲದಲ್ಲಿಟ್ಟುಕೊಳ್ಳುವುದು ಅಗತ್ಯವಾಗಿದೆ ಎಂದು ಹಿರಿಯ ವಾಣಿಜ್ಯೋದ್ಯಮಿ ಡಾ.ಸಮರ್ಥಂ ನಾಗಭೂಷಣಂ ಕಿವಿಮಾತು ಹೇಳಿದರು.

ನಗರದ ಪಿಇಎಸ್ ತಾಂತ್ರಿಕ ಕಾಲೇಜಿನ ಡಾ.ಎಚ್.ಡಿ.ಚೌಡಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಮೊದಲ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಪರಿಚಯಾತ್ಮಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾನವೀಯ ಮೌಲ್ಯಗಳು ಮತ್ತು ಉತ್ತಮ ವ್ಯಕ್ತಿತ್ವ ನಡವಳಿಕೆಯನ್ನು ರೂಢಿಸಿಕೊಂಡು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಿದ್ಯಾರ್ಥಿ ಜೀವನದಲ್ಲಿ ದೊಡ್ಡ ಕನಸುಗಳನ್ನು ಕಾಣಬೇಕು. ಗುರಿಯೂ ಅಷ್ಟೇ ದೊಡ್ಡದಾಗಿರಬೇಕು. ಆತ್ಮವಿಶ್ವಾಸ, ಪರಿಶ್ರಮದಿಂದ ಮುನ್ನಡೆದಾಗ ಸಾಧನೆಯ ಹಾದಿ ಸುಲಭವಾಗುತ್ತದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲು ಪಾಲಕರು ಕಷ್ಟಪಟ್ಟು ದುಡಿಯುತ್ತಾರೆ. ಅವರು ದುಡಿದು ಕಳಿಸುವ ಹಣವನ್ನು ವ್ಯರ್ಥವಾಗದಂತೆ ಉಪಯೋಗಿಸಿಕೊಳ್ಳಿ. ಹಣಕ್ಕಾಗಿ ಮತ್ತೊಬ್ಬರ ಮೇಲೆ ಅವಲಂಬನೆಯಾಗದೆ ಸ್ವತಂತ್ರವಾಗಿ ದುಡಿಯುವ ಮನೋಭಾವ ಬೆಳೆಸಿಕೊಳ್ಳುವಂತೆ ತಿಳಿಸಿದರು.

ತಾಂತ್ರಿಕ ಯುಗದಲ್ಲಿ ಎಲ್ಲ ಕ್ಷೇತ್ರಗಳೂ ಮೂಲಸೌಕರ್ಯಗಳೊಂದಿಗೆ ಬೆಳವಣಿಗೆ ಸಾಧಿಸಿವೆ. 30 ವರ್ಷದಲ್ಲಿ ಹವಾಮಾನ, ಕೃಷಿ ತಂತ್ರಜ್ಞಾನ, ರೋಬೊಟಿಕ್, ಸಂಪರ್ಕ ತಂತ್ರಜ್ಞಾನ ಹೀಗೆ ಎಲ್ಲ ಕ್ಷೇತ್ರಗಳೂ ನಿರೀಕ್ಷೆಗೂ ಮೀರಿದ ಬೆಳವಣಿಗೆ ಸಾಧಿಸಿವೆ. ಅವಕಾಶಗಳ ಬಾಗಿಲು ಮುಕ್ತವಾಗಿ ತೆರೆದುಕೊಂಡಿವೆ. ಅವುಗಳನ್ನು ಉಪಯೋಗಿಸಿಕೊಂಡು ದೇಶಕ್ಕೆ ಏನಾದರೊಂದು ಕೊಡುಗೆ ನೀಡುವುದಕ್ಕೆ ವಿದ್ಯಾರ್ಥಿಗಳು ಕಟಿಬದ್ಧರಾಗುವಂತೆ ಕಿವಿಮಾತು ಹೇಳಿದ ಅವರು, ವಿದ್ಯಾರ್ಥಿಗಳು ಬೌದ್ಧಿಕ ಸಾಮರ್ಥ್ಯದೊಂದಿಗೆ ಕೌಶಲ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ತಾಂತ್ರಿಕ ಪದವಿ ಪಡೆದು ಉದ್ಯೋಗ ಗಳಿಸುವುದಷ್ಟೇ ನಿಮ್ಮ ಗುರಿಯಾಗಿರಬಾರದು. ಸಂಶೋಧನಾಸಕ್ತಿಯನ್ನು ರೂಢಿಸಿಕೊಂಡು ಹೆಚ್ಚಿನ ಅನ್ವೇಷಣೆಯಲ್ಲಿ ತೊಡಗಿ ಮಹತ್ವದ್ದೇನಾದರೂ ಸಾಧಿಸುವಂತೆ ಸಲಹೆ ನೀಡಿದರು.

ಕಾಲೇಜಿನ ಹಿರಿಯ ವಿದ್ಯಾರ್ಥಿಯೂ ಆದ ಇಸ್ರೋ ವಿಜ್ಞಾನಿ ಟಿ.ರವಿ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಓದಿದವರೂ ಸಾಧಕರಾಗಬಹುದು. ಆ ಕೀಳರಿಮೆಯಿಂದ ಹೊರಬರಬೇಕು. ಓದು, ಪರಿಶ್ರಮ, ಜ್ಞಾನದ ಬೆಳವಣಿಗೆ ಮುಖ್ಯವೇ ಹೊರತು ಮಾಧ್ಯಮವಲ್ಲ. ನೀವು ಇಲ್ಲಿಯವರೆಗೆ ಏನಾಗಿದ್ದಿರಿ ಎನ್ನುವುದಕ್ಕಿಂತ ಮುಂದೇನಾಗಬೇಕು ಎಂಬ ಬಗ್ಗೆ ಆಲೋಚಿಸಿ ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆಯಬೇಕು ಎಂದು ಹೇಳಿದರು.

ಕಾಲೇಜಿನ ಹಿರಿಯ ವಿದ್ಯಾರ್ಥಿಯೂ ಆದ ಇಸ್ರೋ ವಿಜ್ಞಾನಿ ಕಮ್ರಾನ್ ಅಹಮದ್ ಮಾತನಾಡಿ, ವಿದ್ಯಾಭ್ಯಾಸಕ್ಕೆ ನೆರವಾದ ಪಾಲಕರು, ವಿದ್ಯೆ ಹೇಳಿಕೊಟ್ಟ ಗುರುವನ್ನು ಎಂದಿಗೂ ಮರೆಯಬಾರದು. ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ನಿಮ್ಮ ಏಳಿಗೆಗೆ ಕಾರಣರಾದ ಅವರನ್ನು ಗೌರವದಿಂದ ಕಾಣಬೇಕು. ವಿದ್ಯಾರ್ಥಿ ಜೀವನದಿಂದಲೇ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ, ಉಪ ಪ್ರಾಂಶುಪಾಲ ಡಾ.ಎಸ್.ವಿನಯ್ ಉಪಸ್ಥಿತರಿದ್ದರು.

ಇದೇ ವೇಳೆ ಇಸ್ರೋ ಸಂಸ್ಥೆಯಲ್ಲಿ ವಿಜ್ಞಾನಿಗಳಾಗಿ ಚಂದ್ರಯಾನ-3ರ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪಿ.ವಾಸುದೇವರಾವ್, ಟಿ.ರವಿ, ಕಮ್ರಾನ್ ಅಹಮದ್ ಅವರನ್ನು ಹಾಗೂ ಹಿರಿಯ ವಾಣಿಜ್ಯೋದ್ಯಮಿ ಡಾ.ಸಮರ್ಥಂ ನಾಗಭೂಷಣಂ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net