ದೇಸಿ ಕ್ರೀಡೆಗಳ ಪರಿಚಯ ಮಾಡಿ

22 ಎಸ್ಕೆಪಿ_1b
Published on

ಶಿಕಾರಿಪುರ: ಆಟೋಟಗಳು ನಮ್ಮ ದೈನಂದಿನ ಬದುಕಿನ ಒಂದು ಭಾಗವಾಗಿರಬೇಕು. ಅವುಗಳು ನಮ್ಮನ್ನು ಚೇತೋಹಾರಿ ಆಗಿಡುವುದರ ಜತೆಗೆ ನಮ್ಮ ಆರೋಗ್ಯಕ್ಕೂ ಪೂರಕವಾಗಿವೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಶಿಕ್ಷಣ ಇಲಾಖೆ, ಅಕ್ಷರ ರೆಸಿಡೆನ್ಸಿಯಲ್ ಸ್ಕೂಲ್ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಪ್ರೌಢಶಾಲಾ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಹಿರಿಯರು ಕುಸ್ತಿ, ಕಬಡ್ಡಿ, ಮಲ್ಲಕಂಬ ಸೇರಿದಂತೆ ಹಲವಾರು ಸದೃಢ ದೇಹಕ್ಕೆ ಪೂರಕವಾದಂತಹ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿದ್ದರು. ಊರಿಗೊಂದು ಗರಡಿಮನೆ ಮತ್ತು ಒಂದಷ್ಟು ಪೈಲ್ವಾನರು ಇರುತ್ತಿದ್ದರು. ಇದರ ಮುಖ್ಯ ಉದ್ದೇಶ ಸ್ವಸ್ಥ ಸಮಾಜ ನಿರ್ಮಾಣ ಎಂದರು.
ಬಾಲ್ಯದಿಂದಲೇ ನಾವು ಮಕ್ಕಳಿಗೆ ಆನ್‌ಲೈನ್ ಗೇಮ್ಗಳಿಗಿಂತ ದೇಸಿ ಕ್ರೀಡೆಗಳ ಪರಿಚಯ ಮಾಡಕೋಡಬೇಕು. ಬಯಲಿನಲ್ಲಿ ಆಟೋಟವಾಡುತ್ತ ಬೆಳೆಯುವ ನಮ್ಮ ಮಕ್ಕಳು ಸದಾ ಆರೋಗ್ಯವಂತರಾಗಿರುತ್ತಾರೆ. ಕೇವಲ ಅಂಕ ಗಳಿಕೆಗಾಗಿ ವಿದ್ಯೆಯಲ್ಲ. ಪಠ್ಯೇತರ ಚಟುವಟಿಕೆಗಳ ಕಡೆಗೆ ನಾವು ಹೆಚ್ಚಿನ ಗಮನಕೊಡಬೇಕಾದಂತಹ ಅಗತ್ಯವಿದೆ. ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳ್ಳಬೇಕು. ಅದನ್ನು ಪಾಲಕರು, ಶಿಕ್ಷಕರು ಗಮನಿಸಿ ಉತ್ತೇಜಿಸಬೇಕು, ಉಪೇಕ್ಷೆ ಮಾಡಬಾರದು. ಅವರ ಪ್ರತಿಭೆಯನ್ನು ಯಾವ ಕಾರಣಕ್ಕೂ ಕೇವಲವಾಗಿ ನೋಡಬಾರದು ಎಂದು ಹೇಳಿದರು.
ನಮ್ಮ ತಾಲೂಕಿನ ಮಕ್ಕಳು ಜುಡೋ ಸೇರಿದಂತೆ ಹಲವು ಕ್ರೀಡೆಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ಇದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಪ್ರಸ್ತುತ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳಿಗೆ ಸ್ಪರ್ದೆಯೊಡ್ಡುತ್ತಿದ್ದಾರೆ, ಐಎಎಸ್, ಐಪಿಎಸ್ ಪರೀಕ್ಷೆಗಳಲ್ಲಿಯೂ ಗ್ರಾಮಾಂತರ ಪ್ರದೇಶದ ಯುವಕರು ತಮ್ಮ ಛಾಪು ಮೂಡಿಸುತ್ತಿದ್ದಾರೆ. ಪಾಲಕರು ಅವರುಗೆ ಸರಿಯಾದ ಮಾರ್ಗದರ್ಶನ ಮತ್ತು ಬೆಂಬಲ ನೀಡಿದರೆ ಅವರು ಯಶಸ್ವಿಯಾಗುತ್ತಾರೆ ಎಂದರು.
ಅಕ್ಷರ ರೆಸಿಡೆನ್ಸಿಯಲ್ ಸ್ಕೂಲ್ನ ವ್ಯವಸ್ಥಾಪಕ ರವಿಕುಮಾರ್, ಪುರಸಭೆ ಸದಸ್ಯ ಪಾಲಾಕ್ಷಪ್ಪ ಭದ್ರಾಪುರ, ತಾಲೂಕು ನೌಕರರ ಸಂಘದ ಅಧ್ಯಕ್ಷ ಮಧುಕೇಶ್ವರ್, ರಾಘವೇಂದ್ರ, ಬೆಣ್ಣೆ ಪ್ರವೀಣ್, ವಿನಯ್ ಸೇಬು, ದೇವರಾಜ ಕಪ್ಪನಹಳ್ಳಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾದಿಕಾರಿಗಳು, ಅಕ್ಷರ ಶಾಲೆಯ ಶಿಕ್ಷಕರು, ಕ್ರೀಡಾ ಸಂಯೋಜಕರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net