

ವೇಮಗಲ್: ದೇಶದ ಮುಂದಿನ ಪ್ರಜೆಗಳಾಗಿ ದೇಶ ಕಟ್ಟುವ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುವ ಮಕ್ಕಳಿಗೆ ಆದರ್ಶವಂತರ ತತ್ವಾದರ್ಶಗಳನ್ನು ಪರಿಚಯಿಸುವುದರಿಂದ ಉಳಿದ ಬದುಕನ್ನು ಅವರೇ ಕಟ್ಟಿಕೊಳ್ಳುತ್ತಾರೆ ಎಂದು ಆದಿಚುಂನಗಿರಿ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಸಾಂಸತಿಯ ಹಬ್ಬದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಆದರ್ಶಗಳೇ ಕೊರತೆಯಾಗಿದೆ. ಈ ಕಾಲಘಟ್ಟದಲ್ಲಿ ಬ್ರಿಟಿಷ್ ವೈಸ್ರಾಯ್ಗಳ ಬಗ್ಗೆ ನಾವು ಮಾತನಾಡುತ್ತೇವೆ. ಆದರೆ ಇದೇ ನೆಲದಲ್ಲಿ ಹುಟ್ಟಿ ಪರಕೀಯರ ದಾಳಿಗೆ ತುತ್ತಾಗಿ ನಮ್ಮ ಸಂಸತಿ, ಧರ್ಮ, ಸಾಹಿತ್ಯವನ್ನು ಕಳೆದುಕೊಳ್ಳುವ ಸಂದರ್ಭ ಬಂದಾಗ ಅಂತಹವರ ವಿರುದ್ಧ ನಿಂತು ಈ ನಾಡನ್ನು ಸಂರಕ್ಷಣೆ ಮಾಡಿ ಹೊಸ ನಾಡನ್ನು ಕಟ್ಟಿದಂತಹ ವ್ಯಕ್ತಿ ಕೆಂಪೇಗೌಡರು, ಅವರನ್ನು ಸ್ಮರಿಸುವುದು ಬಹಳ ವಿಶೇಷ ಎಂದರು.
ಪ್ರಭು ಶ್ರೀರಾಮನ ಎಲ್ಲ ಅಂಶಗಳನ್ನು ಒಳಗೊಂಡಂತಹ ಕೆಂಪೇಗೌಡರು ರಾಜ್ಯವನ್ನು ಕಟ್ಟಿ, ಸಂಪತ್ತನ್ನು ಸೃಷ್ಟಿ ಮಾಡಿದರು. ಜನಗಳಿಗಾಗಿ ತ್ಯಾಗ ಮಾಡಿ ಜನಗಳ ಬದುಕನ್ನು ಸಮೃದ್ಧಿಗೊಳಿಸಲಿಕ್ಕೋಸ್ಕರ ಸಾಮ್ರಾಜ್ಯ ವಿಸ್ತರಣೆ ಮಾಡಿದರು ಎಂದು ತಿಳಿಸಿದರು.
ಇಂತಹ ಸಾಂಸತಿಕ ಹಬ್ಬವನ್ನು ಒಂದು ಭಾಗದಲ್ಲಿ ಮಾಡಿದರೆ ಸಾಲದು ಎಂದು ಬೆಂಗಳೂರು ಪೂರ್ವ ವಿಭಾಗ ಡಿಸಿಪಿ ದೇವರಾಜ್ ಅವರು ಈ ಭಾಗದ ಯುವಕರನ್ನು ಸೇರಿಸಿಕೊಂಡು ಹಿರಿಯರ ಮಾರ್ಗದರ್ಶನ ತೆಗೆದುಕೊಂಡು ಅತ್ಯದ್ಭುತವಾದ ರೀತಿಯಲ್ಲಿ ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ವೇಮಗಲ್ ಅನ್ನು ಇಡೀ ರಾಜ್ಯಕ್ಕೆ ಹೆಸರುವಾಸಿ ಮಾಡಿದ ಮೊದಲಿಗರು ದಿ.ಬೈರೇಗೌಡರು. ವೇಮಗಲ್ಗೆ ಅದರದೇ ಆದ ಇತಿಹಾಸವಿದೆ, ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಎಲ್ಲ ಶಾಸಕರು ಮಂತ್ರಿಗಳಾಗಿದ್ದಾರೆ. ವೇಮಗಲ್ ಇತ್ತೀಚೆಗಷ್ಟೇ ಪಟ್ಟಣ ಪಂಚಾಯಿತಿಯಾಗಿದೆ. ಆದಷ್ಟು ಬೇಗ ತಾಲೂಕು ಸಹ ಆಗಲಿದ್ದು, ವೇಮಗಲ್ಅನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಂತಹ ಕಾರ್ಯಕ್ರಮವನ್ನು ನಾವು ನೀವು ಮಾಡಬೇಕಿದೆ ಎಂದರು.
ನಾಡಪ್ರಭು ಕೆಂಪೇಗೌಡರ ಸಾಂಸತಿಕ ಉತ್ಸವ ಜಿಲ್ಲಾ ಮಟ್ಟದಲ್ಲೂ ಈ ರೀತಿ ಮಾಡಲಿಲ್ಲ 2017ರಲ್ಲಿ ಕೋಲಾರದಲ್ಲಿ ಮಾಡಿದಂತಹ ಕೆಂಪೇಗೌಡರ ಜಯಂತಿಯನ್ನು ಇಡೀ ರಾಜ್ಯ ಕೋಲಾರದ ಕಡೆ ನೋಡಿದ್ದು, ಅದನ್ನು ಬಿಟ್ಟರೆ ಇದೆ ಅದನ್ನು ಸ್ಪೂರ್ತಿಯಾಗಿ ತೆಗೆದುಕೊಂಡ ವೇಮಗಲ್ ಹೋಬಳಿ ಒಕ್ಕಲಿಗರ ಸಂಘದ 24 ಜನ ಸೇರಿ ಬೆಂಗಳೂರು ಪೂರ್ವದ ಡಿಸಿಪಿ ದೇವರಾಜ್ ಅವರ ಮಾರ್ಗದರ್ಶನದಲ್ಲಿ ಇಂತಹ ದೊಡ್ಡ ಕಾರ್ಯಕ್ರಮ ಮಾಡಿದ್ದಾರೆ ಎಂದರು.
ಬಣ್ಣ ಬಣ್ಣದ ಬಾಣ ಬಿರುಸುಗಳಿಂದ ಕಾರ್ಯಕ್ರಮ ಪ್ರಾರಂಭವಾದರೂ ವರುಣನ ಅಡಚಣೆಯಲ್ಲೇ ರಾತ್ರಿ 11ರ ತನಕ ಕಾರ್ಯಕ್ರಮ ನಡೆಯಿತು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಾಯಕ ನಟರಾದ ಶರಣ್, ಚಿಕ್ಕಣ್ಣ, ನಿರೂಪಕಿ ನಯನಾ ಮನರಂಜಿಸಿದರು.
ಸಮಾಜ ಸೇವಕ ಸಿ.ಎಂ.ಆರ್. ಶ್ರೀನಾಥ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಡಾ. ರಮೇಶ್, ಕೋನಪ್ಪ ರೆಡ್ಡಿ, ಯಲುವಳ್ಳಿ ರಮೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ. ಶಂಕರಪ್ಪ, ಉಪಾಧ್ಯಕ್ಷ ಕೃಷ್ಣಾರೆಡ್ಡಿ, ಸಮಾಜ ಸೇವಕಿ ಕುರ್ಕಿ ರಾಜೇಶ್ವರಿ, ಕೋಲಾರ ಹಾಲು ಒಕ್ಕೂಟದ ನಿರ್ದೇಶಕ ಚಂಜಿಮಲೆ ರಮೇಶ್, ಸಮಾಜ ಸೇವಕ ಲಕ್ಷ$್ಮಣ್ ಗೌಡ, ನಾಚಳ್ಳಿ ವೆಂಕಟರೆಡ್ಡಿ, ನಾಗನಾಳ ಸೋಮಣ್ಣ ಬೆಗ್ಲಿ ಸೂರ್ಯ ಪ್ರಕಾಶ್, ವಕ್ಕಲೇರಿ ರಾಮು ಇದ್ದರು.
ಭವ್ಯ ಮೆರವಣಿಗೆ
ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಶ್ರೀ ನಂಜಾವಧೂತ ಸ್ವಾಮೀಜಿ ಅವರನ್ನು ವೇಮಗಲ್ ರಾಮಶೆಟ್ಟಿ ನಿಲ್ದಾಣದಿಂದ ಪಟ್ಟಣದ ತಾಲೂಕು ಕ್ರೀಡಾಂಗಣವರೆಗೆ ಕಳಸಹೊತ್ತ ಮಹಿಳೆಯರು, ಮಂಗಳ ವಾದ್ಯಗಳು, ವೀರಗಾಸೆ, ಯಕ್ಷಗಾನ ತಂಡ, ಪಲ್ಲಕ್ಕಿ, ಅಶ್ವದಳ, ಚಂಡೆವಾದ್ಯ ಎತ್ತುಗಳ ಬಂಡಿಗಳೊಂದಿಗೆ ಪುಷ್ಪಾರ್ಚನೆ ಮಾಡುತ್ತಾ ಮೆರವಣಿಗೆ ಮೂಲಕ ವೇದಿಕೆಗೆ ಸ್ವಾಗತಿಸಲಾಯಿತು.