

ಕೆ.ಎಂ.ದೊಡ್ಡಿ : ಇಲ್ಲಿನ ಜಿ.ಮಾದೇಗೌಡ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ವಿಭಾಗದಿಂದ ಜಿಎಂಐಟಿ ಇಇಇ ಎಕ್ಸ್‌ಪೋ-2024 ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೃಷಿಗೆ ಸಂಬಂಧಿಸಿದ ಆವಿಷ್ಕಾರಗಳನ್ನು ಪರಿಚಯಿಸುವ ಮೂಲಕ ರೈತರಿಗೆ ಉತ್ತೇಜನ ನೀಡಿ ಎಂದು ಕಿವಿಮಾತು ಹೇಳಿದರು.
ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಮಾಜಿ ಸಂಸದ ದಿವಂಗತ ಜಿ.ಮಾದೇಗೌಡ ಅವರು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ತೆರದು ಲಕ್ಷಾಂತರ ಮಕ್ಕಳಿಗೆ ದಾರಿ ದೀಪವಾಗಿದ್ದಾರೆ. ಅವರು ಕಟ್ಟಿದ ಸಂಸ್ಥೆ ಹೆಮ್ಮರವಾಗಿ ಬೆಳೆದು ಶರವೇಗದಲ್ಲಿ ಅಭಿವೃದ್ಧಿ ಪಥದತ್ತ ದಾಪುಗಾಲು ಹಾಕುತಿದ್ದು, ಅವರ ಪುತ್ರ ಮಧು ಜಿ.ಮಾದೇಗೌಡ ಮತ್ತು ಮೊಮ್ಮಗ ಆಶಯ್ ಮಧು ಸಂಸ್ಥೆಯನ್ನು ಪ್ರಗತಿಯತ್ತ ಕೊಡೊಯ್ಯುತ್ತಿದ್ದಾರೆ ಎಂದರು.
ವಿದ್ಯಾರ್ಥಿಗಳಿಗೆ ಸಂಸ್ಥೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದು, ಹೊಸ ಅವಿಷ್ಕಾರದತ್ತ ತಮ್ಮ ಚಿತ್ತ ಹರಿಸಿ ಹೊಸ ಪ್ರಯೋಗಳನ್ನು ಮಾಡುವ ಮೂಲಕ ದೇಶದ ಪ್ರಗತಿಗೆ ತಮ್ಮದೇ ಆದಂತಹ ಕೊಡುಗೆ ನೀಡಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಮಾದೇಗೌಡ ತಾಂತ್ರಿಕ ಮಹಾವಿದ್ಯಾಲಯ ಸೇರಿದಂತೆ ಮೈಸೂರಿನ ವಿದ್ಯಾವಿಕಾಸ್ ತಾಂತ್ರಿಕ ಮಹಾವಿದ್ಯಾಲಯ, ಎಟಿಎಂಇ ಮತ್ತು ತುಮಕೂರಿನ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ ಸೇರಿದಂತೆ ಹಲವು ಕಾಲೇಜುಗಳಿಂದ 35ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಂಡ ಆಗಮಿಸಿ ತಮ್ಮ ಪ್ರಾಜೆಕ್ಟ್‌ಗಳನ್ನು ಪ್ರದರ್ಶನ ಮಾಡಿದರು.
ಜಿ.ಮಾದೇಗೌಡ ತಾಂತ್ರಿಕ ಮಹಾವಿದ್ಯಾಲಯ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥೆ ಪ್ರೊ.ಸಿ.ಸುಮಿತಾ ಮಾರ್ಗದರ್ಶನದಲ್ಲಿ ಪ್ರದರ್ಶನ ಮಾಡಿದ ವಿದ್ಯುತ್ ವಾಹನ ವಿನ್ಯಾಸ ಪ್ರಥಮ ಬಹುಮಾನ ಪಡೆದರೆ, ಮೆಕಾನಿಕಲ್ ವಿಭಾಗದ ಪ್ರೊ.ಪ್ರಶಾಂತ್ ಮಾರ್ಗದರ್ಶನದಲ್ಲಿ ಪ್ರದರ್ಶನ ಮಾಡಿದ ಸ್ಯಾನಿಟರಿಯ ದಹನಕಾರಕ ವಿನ್ಯಾಸ ಮತ್ತು ತಯಾರಿಕೆಗೆ, ಜಿಎಂಐಟಿಯ ಪ್ರೊ.ರವಿಕುಮಾರ್ ಮಾರ್ಗದರ್ಶನದಲ್ಲಿ ಪ್ರದರ್ಶನ ಮಾಡಿದ ಬಹುಪಯೋಗಿ ಸ್ಮಾರ್ಟ್ ಕೃಷಿ ರೊಬಾಟ್ ಮತ್ತು ತುಮಕೂರಿನ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯ ಎಲೆಕ್ಟ್ರಿಕ್ ವಿಭಾಗದ ಮುಖ್ಯಸ್ಥ ಪ್ರೊ. ಪ್ರವೀಣ್ ಮಾರ್ಗದರ್ಶನದಲ್ಲಿ ಸೌರಶಕ್ತಿಯನ್ನು ಉಪಯೋಗಿಸಿ ಹವಾನಿಯಂತ್ರಿಕ ಯೋಜನೆಗಳಿಗೆ ತೃತೀಯ ಬಹುಮಾನ ಲಭಿಸಿತು.
ಅಧ್ಯಕ್ಷತೆಯನ್ನು ಜಿಎಂಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಆರ್.ಚಂದನ್ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕರಾದ ಪ್ರೊ.ರವಿಕುಮಾರ್, ಪ್ರೊ.ಸ್ವರೂಪ್ ವಿವಿಧ ವಿಭಾಗದ ಮುಖ್ಯಸ್ಥರಾದ ಪ್ರೊ.ಸಿ. ಸುಮಿತಾ, ಪ್ರೊ.ಎ.ಸಿ.ನೂತನ್, ಪ್ರೊ.ಪ್ರಶಾಂತ್, ಪ್ರೊ.ತನುಜಾ, ಪ್ರೊ.ಚೇತನ್, ಪ್ರೊ.ನವ್ಯಾಶ್ರೀ, ಪ್ರೊ.ಸಿಂಧು, ಪ್ರೊ.ಶಿಲ್ಲ ಮತ್ತಿತರಿದ್ದರು.