ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸಲು ಸಾಧಕರನ್ನು ಪರಿಚಯಿಸಿ

20 HANUR 1
ಹನೂರಿನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ದಿವಂಗತ ಗುರುಲಿಂಗಯ್ಯ ಅವರ ನುಡಿ ನಮನ ಕಾರ್ಯಕ್ರಮವನ್ನು ಎಂ.ಆರ್. ಮಂಜುನಾಥ್ ಉದ್ಘಾಟಿಸಿದರು. ಕೆ.ಎನ್. ಚೈತ್ರಾ, ಶಂಕರ ಮಹದೇವ, ಮಹೇಶ್, ವೆಂಕಟೇಶ್, ಗುರುಸ್ವಾಮಿ ಇತರರು ಇದ್ದರು.
Published on

ಹನೂರು : ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಸಾಧಕರ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ಪಟ್ಟಣದ ಪಿಎಂಶ್ರೀ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಬಿಇಒ ದಿ.ಗುರುಲಿಂಗಯ್ಯ ಅವರ ನುಡಿ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು ದೇಶದ ಭವಿಷ್ಯವನ್ನು ರೂಪಿಸುವ ರೂವಾರಿಗಳು. ಮಕ್ಕಳ ವ್ಯಕ್ತಿತ್ವ ಹಾಗೂ ಜೀವನವನ್ನು ರೂಪಿಸುವಲ್ಲಿ ಇವರ ಪಾತ್ರ ಅಪಾರ. ಇವರ ದೂರದೃಷ್ಟಿ ದೇಶದ ಪ್ರಗತಿಯನ್ನು ಅವಲಂಬಿಸಿದೆ. ಹನೂರು ಶೈಕ್ಷಣಿಕ ವಲಯವು ವಿಶಾಲವಾಗಿದ್ದು, ಹೆಚ್ಚಿನ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಹಾಗಾಗಿ ಮಕ್ಕಳಲ್ಲಿ ಇರುವ ಕೊರತೆಯನ್ನು ನೀಗಿಸಲು ಈಗಾಗಲೇ ಮುಖ್ಯ ಶಿಕ್ಷಕರ ಸಭೆ ನಡೆಸಿ ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಗಿದೆ. ಹಾಗೆಯೇ ಮಕ್ಕಳ ಭವಿಷ್ಯವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಶಿಕ್ಷಕರ ಮೌಲ್ಯಮಾಪನ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಇದೀಗ ಶೈಕ್ಷಣಿಕ ವಲಯದ ಶಿಕ್ಷಕರು ಪತ್ರ ಬರೆದಿದ್ದು, ಮಕ್ಕಳ ಕಲಿಕಾ ಪ್ರಗತಿ ಹಾಗೂ ಶಾಲೆಯ ಸಮಸ್ಯೆಗಳ ಬಗ್ಗೆ ವರದಿ ಸಲ್ಲಿಸಿದ್ದಾರೆ. ವರದಿಯಂತೆ ಕ್ರಮವಹಿಸಿ ಅಗತ್ಯವಿರುವ ಶಾಲೆಗಳಿಗೆ ಹಂತ ಹಂತವಾಗಿ ಮೂಲ ಸೌಕರ್ಯವನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಇನ್ನು ಶಾಲೆಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸುವುದರ ಮೂಲಕ ಸಾಧಕರ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದು ತಿಳಿಸಿದರು.

ಸೇವೆಗೆ ಹೆಚ್ಚಿನ ಒತ್ತು ನೀಡಿದ್ದರು: ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ದಿವಂಗತ ಗುರುಲಿಂಗಯ್ಯ ಅವರು ಶೈಕ್ಷಣಿಕ ಹಿತದೃಷ್ಟಿಯಿಂದ ಸೇವೆಗೆ ಹೆಚ್ಚಿನ ಒತ್ತು ನೀಡಿದ್ದರು. ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಅಪಾರ ಶ್ರಮ ಹಾಕಿದ್ದರು. ಶಿಕ್ಷಕರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದರು. ಆದರೆ ಇವರ ಅಕಾಲಿಕ ನಿಧನ ತುಂಬ ನೋವನ್ನು ಉಂಟು ಮಾಡಿದೆ ಎಂದು ತಿಳಿಸಿದರು.

ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದು: ಸಾಹಿತಿ ಶಂಕನಪುರ ಮಹದೇವ ಮಾತನಾಡಿ, ದೇಶ ಹಾಗೂ ಸಮಾಜ ಕಟ್ಟುವುದರಲ್ಲಿ ಹಾಗೂ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಪಾರ. ಹಾಗಾಗಿ ಶಿಕ್ಷಕ ವೃತ್ತಿ ಶ್ರೇಷ್ಠವಾದದು. ಇನ್ನು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ದಿವಂಗತ ಗುರುಲಿಂಗಯ್ಯ ಅವರು ನನ್ನ ವಿದ್ಯಾರ್ಥಿ. ವಿದ್ಯಾರ್ಥಿ ದೆಸೆಯಲ್ಲಿ ಪ್ರತಿಭಾನ್ವಿತರಾಗಿದ್ದರು. ಇವರು ಗಾಯಕರಾಗಿದ್ದು ರಂಗಭೂಮಿ, ಜನಪದ ಕ್ಷೇತ್ರ ಸೇರಿದಂತೆ ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಆದರೆ ಇವರ ಅಗಲಿಕೆ ನಿಜಕ್ಕೂ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಭಾವುಕತೆ ವ್ಯಕ್ತ: ಈವರೆಗೂ ಪ್ರತಿ ವರ್ಷವೂ ಕೂಡ ಶಿಕ್ಷಕರ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಶೈಕ್ಷಣಿಕ ವಲಯದ ಎಲ್ಲ ಶಿಕ್ಷಕರು ಕೂಡ ಲವಲವಿಕೆ ಹಾಗೂ ಸಂತೋಷದಿಂದ ಭಾಗವಹಿಸುತ್ತಿದ್ದರು. ಆದರೆ ಈ ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಗುರುಲಿಂಗಯ್ಯ ಅವರು ಸೇವಾ ಅವಧಿಯಲ್ಲೇ ನಿಧನ ಹೊಂದಿದ್ದರಿಂದ ಶೈಕ್ಷಣಿಕ ವಲಯದಲ್ಲಿ ಸೂತಕದ ಛಾಯೆ ಆವರಿಸಿತ್ತು. ಹಾಗಾಗಿ ಈ ವರ್ಷ ಶಿಕ್ಷಕರ ದಿನವನ್ನು ಸರಳವಾಗಿ ಆಚರಿಸಲಾಯಿತು. ಆಗಮಿಸಿದ್ದ ಜನಪ್ರತಿನಿಧಿಗಳು ಹಾಗೂ ಶಿಕ್ಷಕರಲ್ಲಿ ಮೌನದ ಛಾಯೆ ಆವರಿಸಿದ್ದು, ಭಾವುಕತೆ ವ್ಯಕ್ತವಾಗಿತ್ತು.

ಕಾರ್ಯಕ್ರಮದಲ್ಲಿ ದಿವಂಗತ ಗುರುಲಿಂಗಯ್ಯ ಅವರಿಗೆ ನುಡಿ ನಮನ ಸಲ್ಲಿಸಲಾಯಿತು. ನಿವೃತ್ತಿ ಶಿಕ್ಷಕರು ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಇದೆ ವೇಳೆ ಗುರುಲಿಂಗಯ್ಯ ಅವರ ಪತ್ನಿ ಉಷಾರಾಣಿ ಅವರನ್ನು ಸನ್ಮಾನಿಸಲಾಯಿತು.

ತಹಸೀಲ್ದಾರ್ ಕೆ.ಎನ್ ಚೈತ್ರಾ, ಬಿಇಒ ಮಹೇಶ್, ಬಿಆರ್‌ಸಿ ವೆಂಕಟೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮಲಿಂಗಂ ಹಾಗೂ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net