ಬಡವರಿಗೆ ಬಡ್ಡಿ ರಹಿತ ಸಾಲ

LOAN
Published on

ಶಶಿ ಈಶ್ವರಮಂಗಲ

ಸರ್ವೆ ಗ್ರಾಮದ ರೆಂಜಲಾಡಿ ಬದ್ರಿಯಾ ಜುಮಾ ಮಸೀದಿ ಅಧೀನದಲ್ಲಿ ಕಳೆದ 18 ವರ್ಷಗಳಿಂದ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದ ‘ಆದರ್ಶ ಸೇವಾ ಸಂಘ’ ಈ ವರ್ಷ ‘ಬಡ್ಡಿ ರಹಿತ ಸಾಲ’ ಎಂಬ ವಿನೂತನ ಯೋಜನೆಗೆ ಚಾಲನೆ ನೀಡಿದೆ.

ಜಮಾತ್ ವ್ಯಾಪ್ತಿಯ ಆರ್ಥಿಕವಾಗಿ ದುರ್ಬಲವಾಗಿರುವವರು ಅಗತ್ಯ ಸಂದರ್ಭ ಸಾಲ ಪಡೆದು ದುಬಾರಿ ಬಡ್ಡಿ ಕಟ್ಟುವಂತಾಗಬಾರದು, ಆರ್ಥಿಕವಾಗಿ ಸಬಲರಾಗಿ ಸ್ವಾಭಿಮಾನದಿಂದ ಜೀವನ ಸಾಗಿಸಬೇಕು ಎಂಬುದು ಯೋಜನೆ ಉದ್ದೇಶ.

ಎ+, ಎ, ಬಿ+, ಬಿ ಮುಂತಾದ ಗ್ರೇಡ್‌ನ್ನು ಸಂಘ ರೂಪಿಸಿದ್ದು, ಅದರ ಆಧಾರದಲ್ಲಿ ಸಾಲದ ಮೊತ್ತ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಸ್ವ ಉದ್ಯೋಗ ಮತ್ತು ಶಿಕ್ಷಣಕ್ಕೆ ಪ್ರಮುಖ ಆದ್ಯತೆ. ಮಹಿಳೆಯರ ಸ್ವಉದ್ಯೋಗಕ್ಕೂ ಸಂಘ ಸಾಲ ನೀಡಲು ನಿರ್ಧರಿಸಿದೆ.

ಈ ಮಹತ್ವಾಕಾಂಕ್ಷಿ ಯೋಜನೆಗೆ ಜ.9ರಂದು ರೆಂಜಲಾಡಿ ಮಸೀದಿ ವಠಾರದಲ್ಲಿ ಚಾಲನೆ ನೀಡಲಾಗಿದೆ. ಸಂಘದ ಸ್ಥಾಪಕಾಧ್ಯಕ್ಷ ಆರ್.ಎಂ ಅಲಿ ಹಾಜಿ ರೆಂಜಲಾಡಿ, ಅಧ್ಯಕ್ಷ ಇಮ್ರಾನ್ ಮಲ್ನಾಡ್, ಕಾರ್ಯದರ್ಶಿ ರಹೀಂ ರೆಂಜಲಾಡಿ, ಕೋಶಾಧಿಕಾರಿ ಲತೀಫ್ ಸಂಘದ ರುವಾರಿಗಳು.

 10 ಪಟ್ಟು ಸಾಲ: ಬಡ್ಡಿ ರಹಿತ ಸಾಲ ಯೋಜನೆಗೆ ನಿರ್ದಿಷ್ಟ ಬಂಡವಾಳ ಕ್ರೋಡೀಕರಿಸಲಾಗಿದೆ. ಒಂದು ವರ್ಷದ ಅವಧಿಯಲ್ಲಿ ಹಲವರು ನಿರ್ದಿಷ್ಟ ಮೊತ್ತ ಉಳಿತಾಯ ಖಾತೆಯಲ್ಲಿ ಜಮೆ ಮಾಡಿ ಸದಸ್ಯರಾಗಿದ್ದಾರೆ. ಹೀಗೆ ಠೇವಣಿ ನೀಡಿದವರಿಗೆ ತಮ್ಮ ಅಗತ್ಯಕ್ಕೆ ಅನುಸಾರವಾಗಿ ಅದರ ಹತ್ತು ಪಟ್ಟು ಸಾಲದ ರೂಪದಲ್ಲಿ ಪಡೆಯಲು ಅವಕಾಶವಿದೆ. ಅಂದರೆ, 5 ಸಾವಿರ ರೂ. ಮೊತ್ತ ನೀಡಿದಾತ 50 ಸಾವಿರ ರೂ. ತನಕ ಬಡ್ಡಿ ರಹಿತ ಸಾಲ ಪಡೆಯಬಹುದು. ರೆಂಜಲಾಡಿ ಜಮಾತ್‌ಗೆ ಈ ಯೋಜನೆ ಸೀಮಿತ.

ಬಡ್ಡಿ ರಹಿತ ಸಾಲ ಯೋಜನೆ ಎನ್ನುವ ಅತ್ಯುತ್ತಮ ಯೋಜನೆ ರೂಪಿಸಿ ಕಾರ್ಯಗತಗೊಳಿಸಿರುವ ರೆಂಜಲಾಡಿ ಆದರ್ಶ ಸೇವಾ ಸಂಘ ರಾಜ್ಯಕ್ಕೆ ಮಾದರಿ. ಸ್ವಉದ್ಯೋಗಕ್ಕೆ ಪ್ರೋತ್ಸಾಹ ಕೊಟ್ಟು ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದರಿಂದ ಸಮಾಜದಲ್ಲಿ ಬಹುದೊಡ್ಡ ಪರಿವರ್ತನೆ ಸಾಧ್ಯವಿದೆ.

ಮಹಮ್ಮದ್ ಬಡಗನ್ನೂರು, ರಾಜ್ಯ ಸಂಪನ್ಮೂಲ ವ್ಯಕ್ತಿ

ಕಳೆದ ವರ್ಷ ಪ್ರತೀ ವಾರ ಸಭೆ ನಡೆಸಿ, ವಾರಕ್ಕೆ 100-200 ರೂ.ರಂತೆ ಜಮಾಅತ್‌ನ ಹಲವು ಸದಸ್ಯರಿಂದ ಹಣ ಸಂಗ್ರಹಿಸಿದ್ದೆವು. ಈ ಯೋಜನೆಯಲ್ಲಿ ಸೇರಿಕೊಂಡು ಸರಿಯಾದ ರೀತಿಯಲ್ಲಿ ಹಣ ಪಾವತಿಸಿದವರಿಗೆ ಬಡ್ಡಿರಹಿತ ಸಾಲ ನೀಡಲಾಗುವುದು. ಆಸಕ್ತರಿಗೆ ಮುಂದೆಯೂ ಈ ಯೋಜನೆಗೆ ಸೇರಿಕೊಳ್ಳುವ ಅವಕಾಶವಿದೆ. ಸಾಲದಲ್ಲಿ ಸ್ವಉದ್ಯೋಗಕ್ಕೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ.

ಲತೀಫ್ ರೆಂಜಲಾಡಿ, ಆದರ್ಶ ಸೇವಾ ಸಮಿತಿ ಖಜಾಂಚಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net