

ಕಲಬುರಗಿ: ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಮಧ್ಯಮ ಮತ್ತು ದೀರ್ಘಾವಧಿ ಸಾಲದ ಬಡ್ಡಿಯನ್ನು ಸರ್ಕಾರ ಮನ್ನಾ ಮಾಡುವ ಮೂಲಕ ಬರಗಾಲದ ಸಂದರ್ಭದಲ್ಲಿ ಅನ್ನದಾತರ ನೆರವಿಗೆ ಧಾವಿಸಿದೆ ಎಂದು ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ ಹೇಳಿದ್ದಾರೆ.
ಪ್ರಸಕ್ತ ಮುಂಗಾರು-ಹಿಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ರೈತ ಕಂಗಾಲಾಗಿರುವುದನ್ನು ಅರಿತ ಸಿಎಂ ಸಿದ್ದರಾಮಯ್ಯ ಅವರು ಬಡ್ಡಿ ಮತ್ತು ಸುಸ್ತಿ ಬಡ್ಡಿ ಮನ್ನಾ ಮಾಡಿದ್ದಾರೆ. ಇದರ ಲಾಭ ರೈತರಿಗೆ ಆಗಲಿದೆ ಎಂದು ತಿಳಿಸಿದ್ದಾರೆ.
ಕಲಬುರಗಿ-ಯಾದಗಿರಿ ಜಿಲ್ಲಾ ರೈತರು ಬ್ಯಾಕಿನಿಂದ ಸುಮಾರು ೩೦ ಕೋಟಿ ರೂ. ಸಾಲ ಪಡೆದಿದ್ದು, ಅದಕ್ಕೆ ೬೦ ಕೋಟಿ ರೂ. ಬಡ್ಡಿಯಾಗಿತ್ತು. ಈಗ ಸರ್ಕಾರ ಬಡ್ಡಿ ಮನ್ನಾ ಮಾಡಿದ್ದರಿಂದ ನಿಗದಿತ ಅವಧಿಯೊಳಗೆ ರೈತರು ಅಸಲು ಪಾವತಿಸಿ ಯೋಜನೆ ಲಾಭವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಹಿಂದೆ ನಾನು ಅಧ್ಯಕ್ಷರಾಗಿದ್ದಾಗ ಸಾಲ ಮನ್ನಾ ಆಗಿತ್ತು. ಈಗ ಮತ್ತೆ ಸರ್ಕಾರ ಬಡ್ಡಿ ಮನ್ನಾ ಮಾಡಿದೆ. ಈ ಸಂಬAಧ ಹಲವು ಸಲ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಲಾಗಿತ್ತು. ಈಗ ಘೋಷಿಸುವ ಮೂಲಕ ರೈತರು ಮತ್ತು ಬ್ಯಾಂಕಿನ ಬೇಡಿಕೆಗೆ ಸ್ಪಂದಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ.