

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆರೆ ಹಾಗೂ ಬೃಹತ್ ನೀರುಗಾಲುವೆಗಳ ಒತ್ತುವರಿಯನ್ನು ಭೂದಾಖಲೆ ಹಾಗೂ ಕಂದಾಯ ಇಲಾಖೆಗಳ ಸಮನ್ವಯದೊಂದಿಗೆ ಗುರುತಿಸಿ ತೆರವುಗೊಳಿಸಬೇಕು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಮಳೆ ನೀರುಗಾಲುವೆ ಹಾಗೂ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಬುಧವಾರ ವಿವಿಧ ವಿಭಾಗಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನಗರದಲ್ಲಿ ಬೃಹತ್ ನೀರುಗಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಸ್ಥಳಗಳನ್ನು ಭೂಮಾಪಕರಿಂದ ಸರ್ವೇ ನಡೆಸಿ ಗುರುತಿಸಬೇಕು. ತಹಸೀಲ್ದಾರ್ ಅವರು ಒತ್ತುವರಿದಾರರನ್ನು ಗುರುತಿಸಿ ವಿಶೇಷ ಜಿಲ್ಲಾಧಿಕಾರಿಗೆ ಸಲ್ಲಿಸಿ ಸೂಕ್ತ ಆದೇಶಗಳನ್ನು ಜಾರಿ ಮಾಡಿರುವಂತಹ ಒತ್ತುವರಿಗಳನ್ನು ಕೂಡಲೆ ತೆರವುಗೊಳಿಸಬೇಕು. ಹೈಕೋರ್ಟ್‌ನಲ್ಲಿ ತಡೆಯಾಜ್ಞೆಯಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿಕೊಂಡು ತೆರವು ಕಾರ್ಯಾಚರಣೆ ನಡೆಸಲು ನಿದೇರ್ಶನ ನೀಡಲಾಯಿತು.
ಬೃಹತ್ ನೀರುಗಾಲುವೆ ಒತ್ತುವರಿ ವಿವರ:
ನಗರದಲ್ಲಿ ಹೊಸ ಒತ್ತುವರಿ ಸೇರಿ 4,316 ಪ್ರಕರಣಗಳನ್ನು ಗುರುತಿಸಲಾಗಿದೆ. ಅದರಲ್ಲಿ 2,473 ಪ್ರಕರಣಗಳನ್ನು ತೆರವುಗೊಳಿಸಿದ್ದು, ಇನ್ನೂ 1,648 ತೆರವು ಬಾಕಿ ಇದೆ. 195 ಒತ್ತುವರಿ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಭೂಮಾಪನಾ ಇಲಾಖೆಯಲ್ಲಿ 889 ಒತ್ತುವರಿ ಪ್ರಕರಣ, ಕಂದಾಯ ಇಲಾಖೆಯಲ್ಲಿ 615 ಹಾಗೂ ಪಾಲಿಕೆಯಲ್ಲಿ 144 ಪ್ರಕರಣಗಳಿದ್ದು, ಆಯಾ ವಿಭಾಗಗಳಿಗೆ ಕೂಡಲೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ತಹಸೀಲ್ದಾರ್ ಆದೇಶವನ್ನು ಜಾರಿಗೊಳಿಸಿದ ನಂತರ, ಹಂತ-ಹಂತವಾಗಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ರಾಜಕಾಲುವೆ ವಿಭಾಗದ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್, ಭೂಮಾಪನ, ಕಂದಾಯ ವ್ಯವಸ್ಥೆ ಹಾಗೂ ಭೂದಾಖಲೆಗಳ ಇಲಾಖೆಯ ಆಯುಕ್ತ ಜೆ. ಮಂಜುನಾಥ್, ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ವಿನೋತ್ ಪ್ರಿಯಾ, ಸ್ನೇಹಲ್, ರಮ್ಯಾ, ಕರೀಗೌಡ, ರಮೇಶ್, ಶಿವಾನಂದ್ ಕಪಾಶಿ, ಪ್ರಧಾನ ಅಭಿಯಂತರ ಪ್ರಹ್ಲಾದ್, ವಲಯ ಜಂಟಿ ಆಯುಕ್ತರು, ವಲಯ ಮುಖ್ಯ ಅಭಿಯಂತರರು ಸೇರಿ ಇನ್ನಿತರ ಅಧಿಕಾರಿಗಳು ಇದ್ದರು.
ಕೆರೆಗಳ ಒತ್ತುವರಿ ಗುರುತಿಸಿ ತೆರವುಗೊಳಿಸಿ:
ಬಿಬಿಎಂಪಿ ವ್ಯಾಪ್ತಿಯಲ್ಲಿ 202 ಕೆರೆಗಳಿದ್ದು, 183 ಕೆರೆಗಳು ಜೀವಂತ ಕೆರೆಗಳಾಗಿವೆ. ಈ ಪೈಕಿ 159 ಕೆರೆಗಳಲ್ಲಿ ಒತ್ತುವರಿ ಆಗಿರುವುದನ್ನು ಗುರುತಿಸಿದ್ದು, ಹೈಕೋರ್ಟ್‌ಗೆ ಸಲ್ಲಿಸಿರುವ ಕ್ರಿಯಾ ಯೋಜನೆಯ ಪ್ರಕಾರ ಕ್ರಮವಹಿಸಲು ತಹಸೀಲ್ದಾರ್‌ಗೆ ಪತ್ರ ಬರೆಯಲಾಗಿದೆ. ಈ ಪೈಕಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರು 124 ಕೆರೆಗಳ ಸಮೀಕ್ಷೆ ಮಾಡಿ ಗಡಿ ಗುರುತಿಸಿರುವ ಕೆರೆಗಳಿಗೆ ಸಂಬಂಧಿಸಿ 82 ಕೆರೆಗಳ ನಕ್ಷೆಯನ್ನು ನೀಡಲಾಗಿದೆ. ಒತ್ತುವರಿ ತೆರವು ಕಾರ್ಯಾಚರಣೆ ಸಂಬಂಧ ಹೈಕೋರ್ಟ್ ನಿರ್ದೇಶನದಂತೆ ಕ್ರಮವಹಿಸುವುದು. ಇಲ್ಲವಾದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಮುಖ್ಯ ಆಯುಕ್ತರು ಸೂಚಿಸಿದ್ದಾರೆ.