

ಪ್ರಶಾಂತ ಭಾಗ್ವತ, ಉಡುಪಿ
ಶ್ರೇಷ್ಠ ವಿದ್ವಾಂಸರೂ, ಕರ್ನಾಟಕದ ವಿದ್ವತ್ ಪರಂಪರಾ ವಲಯದಲ್ಲಿ ಕರಾವಳಿ ಭಾಗವನ್ನು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದ ಕೀರ್ತಿ ಪಾಂಡಿತ್ಯಪೂರ್ಣ ವ್ಯಕ್ತಿತ್ವದ ಡಾ. ಪಾದೇಕಲ್ಲು ವಿಷ್ಣು ಭಟ್ಟ ಅವರಿಗೆ ಸಲ್ಲುತ್ತದೆ.
ಏ.30 ಹಾಗೂ ಮೇ 1ರಂದು ರಾಜಾಂಗಣದಲ್ಲಿ ನಡೆಯಲಿರುವ ಉಡುಪಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಸುಕೃತಿಯ ಸರ್ವಾಧ್ಯಕ್ಷತೆ ವಹಿಸಿದ್ದು, ವಿಜಯವಾಣಿಯೊಂದಿಗೆ ಕನ್ನಡದ ಮನ ತೆರೆದಿಟ್ಟಿದ್ದಾರೆ.
ಎರಡು ಸಾವಿರ ವರ್ಷದಷ್ಟು ಐತಿಹ್ಯದ ಕನ್ನಡವಿಂದು ಬದಲಾಗಿದೆಯೇ?
ಅತಿದೊಡ್ಡ ಪರಂಪರೆ ಇರುವ ಕನ್ನಡ ಸಾಹಿತ್ಯ ನಮ್ಮದು. ಕಾಲಕಾಲಕ್ಕೆ ಅನೇಕ ಬದಲಾವಣೆ ಕಂಡಿದೆ. ಹಿಂದಿನದಕ್ಕಿಂತ ಅತಿ ಶೀಘ್ರವಾಗಿ ಈಗ ಬದಲಾವಣೆ ಆಗುತ್ತಿದೆ. ಹಳೆಯ ಕಾವ್ಯದ ಬದಲು ನವೋದಯ ಬಂತು. ಬಳಿಕ ಬಂಡಾಯ. ನಂತರ ಸ್ತ್ರೀ ಸಂವೇದನೆ ಹೀಗೆ ಹೊಸ ವಿಚಾರಧಾರೆ ಬಂತು. ದಶಕದಿಂದ ಈಚೆಗೆ ದೊಡ್ಡ ಚಳವಳಿ ಕಂಡು ಬಂದಿಲ್ಲ. ಪುನಹ ಗೇಯ (ಕಾವ್ಯ) ರೂಪಕ್ಕೆ ಹಿಂದಿರುವ ಲಕ್ಷಣ ಕಾಣಿಸುತ್ತಿದೆ.
ತವರಿನಲ್ಲೇ ಕನ್ನಡಕ ಹಾಕಿ ಕನ್ನಡ ಹುಡುಕುವ ಸ್ಥಿತಿ ಬಂತೇ?
ಇದಕ್ಕೆ ಇಡೀ ಸಮಾಜವೇ ಕಾರಣ. ಇಂಗ್ಲಿಷ್ ಮೋಹದ ಧೋರಣೆಯಿಂದ ಮಾತೃಭಾಷೆಯ ಪ್ರಜ್ಞೆ ಕಡಿಮೆಯಾಗುತ್ತಿದೆ. ಅದನ್ನು ಒಬ್ಬರಿಂದ ಸರಿಪಡಿಸಲು ಸಾಧ್ಯವಿಲ್ಲ. ಅದೊಂದು ಪ್ರವಾಹವಾಗಿದ್ದು, ಈಜಲೇಬೇಕು. ಹಾಗೆಂದು ಪ್ರಯತ್ನ ಬಿಡಬಾರದು. ಹೊಸ ಕಾಲದ ತಂತ್ರಜ್ಞಾನ ಬಳಸಿಕೊಂಡು ಕನ್ನಡ ಸಾಹಿತ್ಯದ ರಚನೆ, ಪ್ರಸಾರ ಎರಡೂ ಬೆಳೆಯಬೇಕು.
ಕನ್ನಡ ಕಲಿತರೆ ಉನ್ನತ ಉದ್ಯೋಗ ಸಿಗದೆಂಬುದು ನಿಜವೇ?
ಇದು ಪೂರ್ತಿ ನಿಜವಲ್ಲ. ಇದಕ್ಕೆ ಬೇರೆ ಬೇರೆ ಸಾಮಾಜಿಕ ಕಾರಣವಿದೆ.
ಕನ್ನಡ ನಾಡು-ನುಡಿ, ಸಂಸ್ಕೃತಿ ಬಗ್ಗೆ ಅನಿಸಿಕೆಯೇನು?
ಕನ್ನಡವೆಂಬುದು ಪರಂಪರೆಯ ದೊಡ್ಡ ಭಾಗ. ಅದನ್ನು ಕ್ರಿಯಾತ್ಮಕವಾಗಿ ಮುಂದುವರಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ. ಕನ್ನಡವೆಂಬ ಕೇವಲ ಅಭಿಮಾನವಿದ್ದರೆ ಪ್ರಯೋಜನಕ್ಕೆ ಬರದು. ಕನ್ನಡದ ಮೇಲೆ ಪ್ರೀತಿ ಇರಲಿ. ಪಾಲಕರು-ಶಿಕ್ಷಕರು ಮಕ್ಕಳಲ್ಲಿ ಕನ್ನಡದ ಪ್ರೀತಿ ಬೆಳೆಸಿ. ಇಂಗ್ಲಿಷ್ ಶಾಲೆಗೆ ಹೋದೆವೆಂದು ಕನ್ನಡ ತ್ಯಜಿಸಬೇಕೆಂದೇನಿಲ್ಲ. ಯಾವುದೇ ಭಾಷೆ ವಿರೊಧಿಸಿವುದೂ ಸಹ ಕನ್ನಡ ಭಾಷಾಭಿವೃದ್ಧಿಯ ಮಾರ್ಗವೂ ಅಲ್ಲ.