ತೊಂದರೆಗಳಿಂದ ಮುಕ್ತಿ, ಹೂಡಿಕೆದಾರರಿಗೆ ಸಿಗಲಿದೆ ಶಕ್ತಿ; ದಾವೋಸ್​ನಲ್ಲಿ ಉದ್ಯಮಿಗಳು ಬಿಚ್ಚಿಟ್ಟ ಸಮಸ್ಯೆಗಳೆಲ್ಲ ಶೀಘ್ರ ಸಮಾಪ್ತಿ

Jagadish Shettar vvani
Published on

ರಾಜ್ಯದ ಕೈಗಾರಿಕಾ ಕ್ಷೇತ್ರದಲ್ಲಿ ಬದಲಾವಣೆಯ ಕನಸಿನೊಂದಿಗೆ ದಾವೋಸ್ ಪ್ರವಾಸದಿಂದ ಹಿಂತಿರುಗಿರುವ ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಮುಂದಿನ ಯೋಜನೆಗಳ ಕುರಿತು ‘ವಿಜಯವಾಣಿ’ಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ದಾವೋಸ್ ಪ್ರವಾಸದಲ್ಲಿ ಅರಿವಾಗಿದ್ದು, ಅವುಗಳಿಗೆ ಶೀಘ್ರ ಮುಕ್ತಿ ನೀಡಲಾಗುವುದು. ಅದಕ್ಕಾಗಿ ನೂತನ ನೀತಿ, ಕಾನೂನಿನಲ್ಲಿ ತಿದ್ದುಪಡಿ, ವಿವಿಧ ಇಲಾಖೆಗಳ ಜತೆ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.

  • ದಾವೋಸ್ ಅನುಭವ ಹೇಗಿತ್ತು?

ದಾವೋಸ್​ನಲ್ಲಿ 30 ವರ್ಷಗಳಿಂದ ವಿಶ್ವ ಆರ್ಥಿಕ ಶೃಂಗ ನಡೆಯುತ್ತಿದ್ದು, 100ಕ್ಕೂ ಅಧಿಕ ದೇಶಗಳು ಅಲ್ಲಿ ಭಾಗವಹಿಸುತ್ತವೆ. ಆರ್ಥಿಕ ನೀತಿ, ಹವಾಮಾನ ಬದಲಾವಣೆ, ವ್ಯಾಪಾರ, ವಹಿವಾಟು ಹೀಗೆ ವಿವಿಧ ವಿಷಯಗಳ ಬಗ್ಗೆ ಚರ್ಚೆಯಾಗುತ್ತದೆ. 2000ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಈ ಸಾಮಾವೇಶದಲ್ಲಿ ಪಾಲ್ಗೊಂಡಿದ್ದರು. ಇದೀಗ 19 ವರ್ಷಗಳ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ನಮಗೆ ಮುಖ್ಯ ರಸ್ತೆಗೆ ಹೊಂದಿಕೊಂಡು ಪೆವಿಲಿಯನ್ ಸಿಕ್ಕಿದ್ದರಿಂದ ಹಾಗೂ ಪಕ್ಕದಲ್ಲಿಯೇ ಇನ್​ಫೋಸಿಸ್, ವಿಫ್ರೋ ಸಹ ಇದ್ದುದರಿಂದ ಪ್ರಚಾರಕ್ಕೆ ಅನುಕೂಲವಾಯಿತು. ಮಧ್ಯಪ್ರದೇಶದ ಸಿಎಂ ಕಮಲನಾಥ್ ನಮ್ಮ ಫೆವಿಲಿಯನ್​ಗೆ ಬಂದು ಮೆಚ್ಚುಗೆ ಸೂಚಿಸಿದರು. ತೆಲಂಗಾಣದ ಮುಖ್ಯ ಕಾರ್ಯದರ್ಶಿ ಅಲ್ಲಿನ ಅಧಿಕಾರಿಗಳನ್ನು ಕಳುಹಿಸಿ ಮಾಹಿತಿ ಪಡೆದರು.

  • ಎಷ್ಟು ಹೂಡಿಕೆ ನಿರೀಕ್ಷೆ ಮಾಡುತ್ತಿದ್ದೀರಿ?

ನವೆಂಬರ್ 3 ರಿಂದ 3 ದಿನ ನಡೆಯುವ ಹೂಡಿಕೆದಾರರ ಸಮಾವೇಶಕ್ಕೆ ಅಲ್ಲಿನ ಹೂಡಿಕೆದಾರರನ್ನು ಆಹ್ವಾನಿಸಿದ್ದೇವೆ. ಶೇ.90 ಜನ ಬರುವ ನಿರೀಕ್ಷೆ ಇದೆ. ಇಲ್ಲಿ ಬಂದು ಒಪ್ಪಂದಗಳಾದಾಗಲೇ ಹೂಡಿಕೆ ಎಷ್ಟು ಬರಲಿದೆ ಎಂಬ ಬಗ್ಗೆ ನಿಖರವಾಗಿ ಹೇಳಲು ಸಾಧ್ಯ. ಲಾಲ್ಲು ಎಂಬ ಸಂಸ್ಥೆ ಹಣ್ಣು, ತರಕಾರಿ ಸಂಸ್ಕರಣಾ ಕ್ಷೇತ್ರದಲ್ಲಿ ತಕ್ಷಣ 2000 ಕೋಟಿ ಹೂಡಿಕೆಗೆ ಆಸಕ್ತಿ ತೋರಿಸಿದೆ. ಬಹಳ ಮುಖ್ಯವಾಗಿ ರಾಜ್ಯವನ್ನು ಅಭಿವೃದ್ಧಿ ಪಡಿಸಬಹುದೆಂಬ ವಿಶ್ವಾಸ ಮುಖ್ಯಮಂತ್ರಿ ಅವರಲ್ಲಿ ಮೂಡಿದೆ.

  • ಕೈಗಾರಿಕೆಗಳಿಗೆ ಭೂಮಿ ನೀಡುವುದಕ್ಕೆ ತರಲಿರುವ ತಿದ್ದುಪಡಿ ಏನು?

ರೈತರಿಂದ ಭೂಮಿ ಖರೀದಿ ಮಾಡಿದರೂ ಭೂ ಪರಿವರ್ತನೆಯಲ್ಲಿ ಸಮಸ್ಯೆ ಇದೆ. ಜಿಲ್ಲಾಧಿಕಾರಿಗಳು ಬೇಗ ಮಾಡಿಕೊಡುವುದಿಲ್ಲ. ಆದ್ದರಿಂದ ಮುಖ್ಯಮಂತ್ರಿ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯಲ್ಲಿ ಒಪ್ಪಿಗೆ ನೀಡಿದ 30 ದಿನದಲ್ಲಿ ಭೂಮಿ ಉದ್ದಿಮೆದಾರರ ಕೈಯಲ್ಲಿ ಇರಬೇಕು. ಜಿಲ್ಲಾಧಿಕಾರಿ 30 ದಿನದಲ್ಲಿ ಮಾಡದಿದ್ದರೂ ಅದನ್ನು ಡೀಮ್್ಡ ಅನುಮತಿ ಎನ್ನುವ ರೀತಿಯಲ್ಲಿ ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 9ಕ್ಕೆ ಅಧಿವೇಶನದಲ್ಲಿ ತಿದ್ದುಪಡಿ ತರಲಾಗುವುದು.

  • ದಾವೋಸ್​ನಿಂದ ಎರಡನೇ ಹಂತದ ನಗರಗಳಿಗೆ ಆದ ಅನುಕೂಲಗಳೇನು?

ಇದುವರೆವಿಗೂ 2ನೇ ಹಂತದ ನಗರಗಳ ಬಗ್ಗೆ ಚರ್ಚೆಯೇ ಆಗಿರಲಿಲ್ಲ. ಹುಬ್ಬಳ್ಳಿ, ಕಲಬುರಗಿ, ಬೀದರ್, ಬೆಳಗಾವಿಗೆ ವಿಮಾನ ಸಂಪರ್ಕ ಇರುವ ಬಗ್ಗೆ ಮಾಹಿತಿ ನೀಡಿದ್ದರಿಂದ ತಮ್ಮ ತಂಡಗಳನ್ನು ಕಳುಹಿಸಿ ಅಧ್ಯಯನ ಮಾಡುವುದಾಗಿ ಅನೇಕರು ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎರಡನೇ ಹಂತದ ನಗರಗಳ ಬಗ್ಗೆ ಚರ್ಚೆಯಾಗಿದ್ದು ಇದೇ ಮೊದಲು.

  • ಮುಚ್ಚಿರುವ ಹಾಗೂ ಮುಚ್ಚುತ್ತಿರುವ ಕೈಗಾರಿಕೆಗಳಿಗೆ ಏನಾದರೂ ನೆರವು?

ಜಾಗತಿಕವಾಗಿ ಆರ್ಥಿಕ ಕುಸಿತ ಇದೆ. ಆದ್ದರಿಂದ ವಾಹನೋದ್ಯಮ, ರಿಯಲ್ ಎಸ್ಟೇಟ್​ಕ್ಷೇತ್ರಗಳಿಗೆ ಸಮಸ್ಯೆಯಾಗಿದೆ. ನಿರ್ವಹಣೆ ಮಾಡಲಾಗದ ಉದ್ದಿಮೆಗಳು ಮುಚ್ಚಿವೆ ಅಷ್ಟೇ. ಆದರೆ ಈ ಕುಸಿತ ತಾತ್ಕಾಲಿಕ ಮಾತ್ರ.

  • ಏಕಗವಾಕ್ಷಿ ಉಪಯೋಗವಾಗುತ್ತಿಲ್ಲ?

ಅದನ್ನು ಸುಧಾರಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಭೂಮಿ ಸಮಸ್ಯೆಯೂ ಕಾಡದಂತೆ ನೋಡಿಕೊಳ್ಳಲಾಗುವುದು. 30 ಸಾವಿರ ಎಕರೆ ಗುರುತಿಸಲಾಗಿದೆ. 12 ಸಾವಿರ ಎಕರೆ ಸ್ವಾಧೀನ ಮಾಡಲು ಕ್ರಮ ಕೈಗೊಳ್ಳಲಾಗಿದೆ.

  • ಕ್ಲಸ್ಟರ್​ಗಳು ಏನಾದವು?

ಕೆಲವು ಕ್ಲಸ್ಟರ್​ಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಕೊಪ್ಪಳದಲ್ಲಿ ಗೊಂಬೆಗಳು, ಹುಬ್ಬಳ್ಳಿಯಲ್ಲಿ ಎಫ್​ಎಂಜಿಸಿ, ಶಿವಮೊಗ್ಗದಲ್ಲಿ ವೆಲ್​ನೆಸ್​ಗೆ ಆದ್ಯತೆ ನೀಡಲಾಗುತ್ತದೆ. ಬೇರೆಯವರು ಬಂದರೆ ಅದಕ್ಕೆ ಆದ್ಯತೆ ನೀಡುತ್ತೇವೆ.

  • ಕೈಗಾರಿಕೆಗೆ ಭೂಮಿ ನೀಡಿರುವ ಬಗ್ಗೆ ಲ್ಯಾಂಡ್ ಆಡಿಟ್ ಏನಾದರೂ ಮಾಡಿಸುತ್ತೀರಾ?

ಹೌದು ಖಂಡಿತ ಮಾಡಿಸಬೇಕಿದೆ, ಆ ನಿಟ್ಟಿನಲ್ಲಿ ಈಗಾಗಲೇ ಸೂಚನೆ ನೀಡಲಾಗಿದೆ. ಕಾನೂನು ಸಮಸ್ಯೆಯಿಂದ ತಡವಾಗಿದ್ದರೆ ಅಂತಹವರಿಗೆ ವಿನಾಯ್ತಿ ನೀಡಲಾಗುತ್ತದೆ. ರಿಯಲ್ ಎಸ್ಟೇಟ್ ಮಾಡುತ್ತಿದ್ದರೆ ವಾಪಾಸು ಪಡೆದು ಬೇರೆಯವರಿಗೆ ಹಂಚಿಕೆ ಮಾಡಲಾಗುತ್ತದೆ.

  • ಹಿಂದೆಯೂ ಹೂಡಿಕೆದಾರರ ಸಮಾವೇಶಗಳು ನಡೆದಿವೆ. ಅನುಕೂಲವಾಗಲಿಲ್ಲ?

ಹಿಂದೆ ನಡೆದಿರುವ ಬಗ್ಗೆ ಈಗ ಪೋಸ್ಟ್ ಮಾರ್ಟಂ ಮಾಡಲು ಆಗದು, ಆಗ ಹೂಡಿಕೆಗೆ ಒಪ್ಪಿ ಇನ್ನೂ ಬಂದಿಲ್ಲ ಎಂದರೆ, ಈಗಲೂ ಬರಲು ಸಾಧ್ಯವಿಲ್ಲ. ಆದ್ದರಿಂದ ಆ ಬಗ್ಗೆ ಯೋಚಿಸದೇ ಹೊಸ ಹೂಡಿಕೆದಾರರನ್ನು ಸೆಳೆಯಲು ಯತ್ನಿಸುತ್ತಿದ್ದೇವೆ. ಈಗ ಬರುವವರಿಗೆ ಎಲ್ಲ ಅನುಕೂಲ ಮಾಡಿಕೊಡುತ್ತೇವೆ ಎಂದರು.

  • ಅನೇಕ ಇಲಾಖೆಗಳು ಸ್ಪಂದಿಸುತ್ತಿಲ್ಲ, ಸ್ಥಳೀಯ ಸಂಸ್ಥೆಗಳು ತೆರಿಗೆ ವಿಚಾರದಲ್ಲಿ ಅಡ್ಡಿ ಮಾಡುತ್ತಿವೆ?

ಹೌದು ಅದು ಗಮನಕ್ಕೆ ಬಂದಿದೆ. ಪ್ರಮುಖವಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಮಸ್ಯೆ ಇದೆ. ಶೀಘ್ರದಲ್ಲಿ ಸಭೆ ಕರೆದು ಚರ್ಚೆ ಮಾಡಲಾಗುವುದು. ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ತೆರಿಗೆ ವಿಚಾರದಲ್ಲಿ ಸಾಕಷ್ಟು ತೊಂದರೆ ನೀಡುತ್ತಿವೆ. ಅದಕ್ಕಾಗಿ ಶೀಘ್ರದಲ್ಲಿಯೇ ಸ್ಪಷ್ಟವಾದ ನೀತಿಯನ್ನು ತರುತ್ತೇವೆ. ಕೈಗಾರಿಕೆ ಅಭಿವೃದ್ಧಿ ಪಡಿಸಿದ ಪ್ರದೇಶ ಇನ್ನೂ ಸ್ಥಳೀಯ ಸಂಸ್ಥೆಗಳಿಗೆ ಸ್ವಾಧೀನ ಆದರೆ ಹಾಗೂ ಆಗದೆ ಇದ್ದರೆ ತೆರಿಗೆ ಹೇಗೆ ವಿಧಿಸಬೇಕು, ಯಾರಿಗೆ ಎಷ್ಟು ತೆರಿಗೆ ಪಾಲು ಇರಬೇಕು ಎಂಬುದನ್ನು ನೀತಿಯಲ್ಲಿ ಸ್ಪಷ್ಟವಾಗಿ ಹೇಳುತ್ತೇವೆ.

ನೆರವಾದ ಕರ್ನಾಟಕ ಮೂಲದ ಸಂಸದ

ಸ್ವಿಡ್ಜರ್​ಲೆಂಡ್​ನಲ್ಲಿ ಕರ್ನಾಟಕ ಮೂಲಕ ಸಂಸದರೊಬ್ಬರು ರಾಜ್ಯದ ಪೆವಿಲಿಯನ್ ಸ್ಥಾಪನೆಗೆ ಸಾಕಷ್ಟು ನೆರವಾಗಿ ದ್ದಾರೆ. ಉಡುಪಿಯಲ್ಲಿ ಜನಿಸಿ, ನಾಲ್ಕೈದು ವರ್ಷ ಇಲ್ಲಿಯೇ ವ್ಯಾಸಂಗ ಮಾಡಿ ಈಗ ಸ್ವಿಡ್ಜರ್​ಲೆಂಡ್​ನಲ್ಲಿ ರಾಜಕೀಯ ಪಕ್ಷವೊಂದನ್ನು ಸೇರಿ ಸಂಸದರಾಗಿರುವ ನಿಕ್ಲಸ್ ಸ್ಯಾಮ್ಯುಯೆಲ್ ಗುಗ್ಗೆರ್ ಮೂರು ದಿನ ರಾಜ್ಯದ ಫೆವಿಲಿಯನ್​ನಲ್ಲಿ ಬಂದು ಅನೇಕ ಹೂಡಿಕೆ ದಾರರನ್ನು ಕರೆ ತಂದು ಪರಿಚಯ ಮಾಡಿಸಿ ದ್ದಾರೆ. ಎಂದು ಜಗದೀಶ್ ಶೆಟ್ಟರ್ ನೆನಪಿಸಿಕೊಂಡರು.

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net