ಅಂತರಾಜ್ಯ ಕಳ್ಳನ ಕಾಲಿಗೆ ಗುಂಡು ಹಾರಿಸಿ ಬಂಧನ

Interstate thief case
ಪೊಲೀಸರ ಫೈರಿಂಗ್‌ನಿಂದ ಎಡಗಾಲಿಗೆ ಗುಂಡು ತಗುಲಿ ಗಾಯಗೊಂಡ ಕಲ್ಕೆರೆ ಮಂಜನಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
Published on

ಶಿವಮೊಗ್ಗ: ಶಿವಮೊಗ್ಗದಲ್ಲಿ ಮತ್ತೆ ಪೊಲೀಸರ ಗುಂಡಿ ಸದ್ದು ಮೊಳಗಿದ್ದು ಅಂತರಾಜ್ಯ ಕಳ್ಳನ ಕಾಲಿಗೆ ಜಯನಗರ ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಬೆಂಗಳೂರು ಕಲ್ಕೆರೆ ನಿವಾಸಿ ಮಂಜುನಾಥ ಅಲಿಯಾಸ್ ಕಲ್ಕೆರೆ ಮಂಜ(47) ಬಂಧಿತ ಆರೋಪಿ. ಆತನ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ 72 ಪ್ರಕರಣ ದಾಖಲಾಗಿದ್ದು, ಅದರಲ್ಲಿ ಮನೆಗಳ್ಳತನ, ಮೋಸ, ಕೊಲೆ ಯತ್ನ ಪ್ರಕರಣಗಳೂ ಇವೆ. ಈತ ಕಳ್ಳತನಕ್ಕಾಗಿ ಶಿವಮೊಗ್ಗದಲ್ಲಿ ಕಳೆದ ಮುರ್ನಾಲ್ಕು ದಿನಗಳಿಂದ ಓಡಾಡುತ್ತಿದ್ದ ಮಾಹಿತಿ ಪೊಲೀಸರಿಗೆ ಲಭಿಸಿತ್ತು.

ಅಲ್ಲದೆ, ಗಾಂಧಿನಗರದಲ್ಲಿ ಕಳೆದ ಏಪ್ರಿಲ್ನಲ್ಲಿ ಮನೆಗಳ್ಳತನ ನಡೆದಿತ್ತು. ಅಲ್ಲಿ ನಡೆದ ಮನೆಗಳ್ಳತನದ ಬಗ್ಗೆ ನಿತಿನ್ ಎಂಬುವರು ಪೊಲೀಸರಿಗೆ ದೂರು ಕಳಿಸಿದ್ದರು. ಐ 20 ಕಾರ್ ಹಾಗೂ11.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಹಾಗೂ ಇತರ ವಸ್ತುಗಳನ್ನು ಕಳುವು ಮಾಡಿಕೊಂಡು ಹೋಗಿದ್ದ. ಈ ಪ್ರಕರಣದಲ್ಲಿ ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಬೆಳಗ್ಗೆ ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ಮಂಜನನ್ನು ಬಂಧಿಸಲು ಜಯನಗರ ಠಾಣೆ ಪೊಲೀಸರು ತೆರಳಿದ್ದರು.

ಈ ಸಂದರ್ಭ ಪೊಲೀಸ್ ಪೇದೆ ದ್ಯಾಮಪ್ಪ ಅವರ ಮೇಲೆ ಮಂಜ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಆತ್ಮರಕ್ಷಣೆಗಾಗಿ ಜಯನಗರ ಪಿಎಸ್‌ಐ ನವೀನ್ ಬ್ಯಾಕೋಡು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಬಳಿಕ ಕಲ್ಕೆರೆ ಮಂಜನ ಎಡಗಾಲಿಗೆ ಗುಂಡು ಹೊಡೆದಿದ್ದಾರೆ. ಗಾಯಾಗೊಂಡ ಪೇದೆ ದ್ಯಾಮಪ್ಪ ಮತ್ತು ಕಲ್ಕೆರೆ ಮಂಜನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ವಿನೋಬನಗರ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net