ಅಂತಾರಾಜ್ಯ ಕಳ್ಳನ ಬಂಧನ, 15 ಬೈಕ್ ವಶ

4KOKATANUR1(1)-Web
ಅಂತಾರಾಜ್ಯ ಬೈಕ್ ಕಳ್ಳನನ್ನು ಪೊಲೀಸರು ಬಂಧಿಸಿರುವುದು. ಸಿಪಿಐ ಶಂಕರಗೌಡ ಬಸನಗೌಡರ, ಪಿಎಸ್‌ಐ ಎಂ.ಡಿ ಘೋರಿ ಇತರರು ಇದ್ದಾರೆ.
Published on

ಕೊಕಟನೂರ: ಅಂತಾರಾಜ್ಯ ಬೈಕ್ ದರೋಡೆಕೋರನೊಬ್ಬನನ್ನು ಅಥಣಿ ಪೊಲೀಸರು ಗುರುವಾರ ಬಂಧಿಸಿದ್ದು, 5 ಲಕ್ಷ ರೂ. ಮೌಲ್ಯದ 15 ಬೈಕ್ ವಶಪಡಿಸಿಕೊಂಡಿದ್ದಾರೆ. ಅಥಣಿ ತಾಲೂಕಿನ ಶಿರಹಟ್ಟಿ ನಿವಾಸಿ, ಸದ್ಯ ಯಲ್ಲಮ್ಮನವಾಡಿ ಗ್ರಾಮದ ನವಗ್ರಾಮ ಪ್ಲಾಟ್‌ನ ವಸತಿಯಿದ್ದ ರಮಜಾನ್ ಹುಸೇನಸಾಬ್ ಐನಾಪುರ (27) ಬಂಧಿತ ವ್ಯಕ್ತಿ. ಅಥಣಿ ಪಟ್ಟಣ, ತಾಲೂಕಿನ ಯಲ್ಲಮ್ಮನವಾಡಿ, ಸುಟ್ಟಟ್ಟಿ ಸೇರಿ ವಿವಿಧ ಗ್ರಾಮಗಳಲ್ಲಿ ಬೈಕ್ ಕಳ್ಳತನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಈತ ಸಿಕ್ಕಿಬಿದ್ದಿದ್ದಾನೆ. ಬಂಧನಕ್ಕೊಳಗಾದ ವ್ಯಕ್ತಿಯ ವಿರುದ್ಧ ಬೆಳಗಾವಿ ಜಿಲ್ಲೆಯಲ್ಲಷ್ಟೇ ಅಲ್ಲದೆ, ಬಾಗಲಕೋಟೆ ಜಿಲ್ಲೆ ಮತ್ತು ನೆರೆಯ ಮಹಾರಾಷ್ಟ್ರದ ವಿವಿಧ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿವೆ. ಕಾರ್ಯಾಚರಣೆ ನಡೆಸಿದ ಅಥಣಿ ಅಪರಾಧ ವಿಭಾಗ ಪಿಎಸ್‌ಐ ಎಂ.ಡಿ.ಘೋರಿ ಹಾಗೂ ಪಿಎಸ್‌ಐ ಕುಮಾರ ಹಾಡಕಾರ ಮತ್ತು ಅಥಣಿ ಪೊಲೀಸ್ ಠಾಣೆ ಸಿಬ್ಬಂದಿ ವಿ.ಜಿ.ಆರೇರ, ಎ.ಎ. ಇರಕರ, ಪಿ.ಬಿ. ನಾಯಿಕ, ಎಂ.ಬಿ. ದೊಡಮನಿ, ಬಿ.ಜೆ.ತಳವಾರ, ಎಸ್.ಕೆ. ನೇಮಗೌಡ ಅವರ ಕಾರ್ಯವನ್ನು ಶ್ಲಾಘಿಸಿ ಬೆಳಗಾವಿ ಆರಕ್ಷಕ ಅಧೀಕ್ಷಕರು ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿ, ಗೌರವಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net